Published
3 months agoon
By
Akkare Newsಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬೇಕು ಎನ್ನುವ ಚರ್ಚೆ ಜೋರಾಗಿರುವ ಸಂದರ್ಭದಲ್ಲಿಯೇ ಮಹತ್ವದ ಬೆಳವಣಿಗೆ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಹೌದು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದಲ್ಲೂ ಬಣ ರಾಜಕೀಯ ಜೋರಾಗಿದೆ.
ಬಿಜೆಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಅಂತ ಕೆಲವರು ಪಟ್ಟು ಹಿಡಿದಿದ್ದರೆ. ಇನ್ನು ಕಾಂಗ್ರೆಸ್‌ನಲ್ಲೂ ಮುಖ್ಯಮಂತ್ರಿ ಬದಲಾವಣೆ ಆಗಬೇಕು ಹಾಗೂ ಉಪ ಮುಖ್ಯಮಂತ್ರಿ ಬದಲಾವಣೆ ಆಗಬೇಕು ಎನ್ನುವ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಚುನಾವಣೆಯಂತಹ ಕ್ರಮಗಳ ಬಗ್ಗೆ ಚರ್ಚೆ ನಡೆದಿದ್ದರೆ. ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ಬೆಳವಣಿಗೆಯೊಂದು ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಸೈಡ್‌ಲೈನ್ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಹೌದು ಈ ಪ್ರಶ್ನೆಗೆ ಕಾರಣವೂ ಇದೆ. ಅದೇನು ಅಂತ ನೋಡೋಣ..
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಜೋರಾಗಿದೆ. ಈಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು. ಯಾವಾಗ ಏನು ಮಾಡಬೇಕು ಎನ್ನುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದರು. ಖರ್ಗೆ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಸೂಚನೆ ಕೊಟ್ಟ ಮೇಲೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದನ್ನು ರಾಜ್ಯ ಕಾಂಗ್ರೆಸ್ ನಾಯಕರು ಬಿಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನೇ ಸೈಡ್‌ಲೈನ್ ಮಾಡುವ ಪ್ರಯತ್ನ ನಡೆದಿದೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಸ್ಟಾರ್ ಪ್ರಚಾರಕರ ಪಟ್ಟಿ.
ದೆಹಲಿ ಚುನಾವಣೆಗೆ ಇನ್ನೇನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈ ರೀತಿ ಇರುವಾಗಲೇ ದೆಹಲಿ ವಿಧಾನಸಭೆ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರೇ ಇಲ್ಲ ಎಂದು ಬಿಜೆಪಿ ಹಾಸ್ಯ ಮಾಡಿದೆ. ಹೌದು ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂದು ಹೇಳಿದೆ
ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೇಟ್ ಪಾಸ್ ಕೊಟ್ಟಿದೆ. ದೆಹಲಿ ಚುನಾವಣೆಗೆ ಎಐಸಿಸಿ ಹೊರಡಿಸಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಥಾನವೇ ಇಲ್ಲ ಎಂದು ಹೇಳಿದೆ. ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಅವರ ಕೈ ಬಿಟ್ಟು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಕೊಟ್ಟಿದೆ. ಇದನ್ನು ನೋಡಿದರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿ ಬಹುತೇಕ ಖಚಿತ-ನಿಶ್ಚಿತ-ಖಂಡಿತ ಎಂದು ವ್ಯಂಗ್ಯವಾಡಿದೆ.
ದೆಹಲಿ ಚುನಾವಣೆ ಫೆಬ್ರವರಿ 5ರಂದು ನಡೆಯಲಿದ್ದು. ಫೆಬ್ರವರಿ 8ಕ್ಕೆ ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ನಡುವೆ ತೀವ್ರ ಪೈಪೋಟಿ ಇದೆ. ಇಲ್ಲಿ ಕಾಂಗ್ರೆಸ್ ಇದ್ದರೂ ಕಾಂಗ್ರೆಸ್ ಇಲ್ಲಿ ಪ್ರಬಲವಾಗಿಲ್ಲ. ಹೀಗಾಗಿ ತ್ರಿಕೋನ ಸ್ಪರ್ಧೆ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.