Published
2 months agoon
By
Akkare Newsದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಗೂಂಡಾಗಿರಿ’ ನಡೆಸುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಫೆಬ್ರವರಿ 5 ರ ಚುನಾವಣೆಯಲ್ಲಿ ಎಎಪಿ “ನಿರ್ಣಾಯಕ ಗೆಲುವಿನ”ತ್ತ ಸಾಗುತ್ತಿದೆ, ಇದು ಬಿಜೆಪಿ ನಾಯಕರನ್ನು, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು “ಗೊಂದಲ ಮತ್ತು ಹತಾಶೆಗೆ” ತಳ್ಳಿದೆ ಎಂದು ಹೇಳಿದ್ದಾರೆ.
“ಎಎಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಿದೆ ಮತ್ತು ಅಮಿತ್ ಶಾ ಗೊಂದಲಕ್ಕೊಳಗಾಗಿದ್ದಾರೆ. ಸೋಲನ್ನು ಅನುಭವಿಸುವ ಕಾರಣ ಬಿಜೆಪಿ ಗೂಂಡಾಗಿರಿ ನಡೆಸುತ್ತಿದೆ” ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಎಎಪಿ ಸ್ವಯಂಸೇವಕರು ಮತ್ತು ಬೆಂಬಲಿಗರನ್ನು ಬೆದರಿಸಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ನಮ್ಮ ನಾಯಕರು ಮತ್ತು ಬೆಂಬಲಿಗರಿಗೆ ಬಿಜೆಪಿ ಸೇರುವಂತೆ ಬೆದರಿಕೆ ಹಾಕಲಾಗುತ್ತಿದೆ, ಇಲ್ಲವೆಂದರೆ ಬಂಧನ ಮತ್ತು ದಾಳಿಗಳನ್ನು ಎದುರಿಸಲು ಸಿದ್ದರಾಗಿ ಎಚ್ಚರಿಸುತ್ತಿದ್ದಾರೆ. ಆದರೆ ನಾವು ಭಯಪಡುವುದಿಲ್ಲ. ದೆಹಲಿಯು ಅಂತಹ ಬೆದರಿಕೆ ತಂತ್ರಗಳನ್ನು ಸಹಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ, ಕೇಜ್ರಿವಾಲ್ ಅವರು ‘AmitShahKiGoondagardi’ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಎಕ್ಸ್ನಲ್ಲಿ ಹೊಸ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.