Connect with us

ರಾಷ್ಟ್ರೀಯ

ದೆಹಲಿ ವಿಮಾನ ನಿಲ್ದಾಣದಲ್ಲಿ ₹40 ಕೋಟಿ ಮೌಲ್ಯದ ಕೊಕೇನ್ ಹೊಟ್ಟೆಯೊಳಗಿಟ್ಟು ಕಳ್ಳಸಾಗಣೆ!

Published

on

ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಸುಮಾರು 40 ಕೋಟಿ ರೂ. ಮೌಲ್ಯದ ಕೊಕೇನ್ ಕಳ್ಳಸಾಗಣೆ ಮಾಡಿದ್ದ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಭಾನುವಾರ ತಿಳಿಸಿದೆ. ಕೊಕೇನ್ ತುಂಬಿದ ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದ ಇಬ್ಬರು ಬ್ರೆಜಿಲ್ ಮಹಿಳೆಯರು ಮತ್ತು ಕೀನ್ಯಾದ ವ್ಯಕ್ತಿಯೊಬ್ಬರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದು ಅದು ಹೇಳಿದೆ.

ಮೊದಲ ಪ್ರಕರಣದಲ್ಲಿ, ಜನವರಿ 28 ರಂದು ಸಾವೊ ಪಾಲೊದಿಂದ ಪ್ಯಾರಿಸ್ ಮೂಲಕ ಬಂದಿದ್ದ 26 ವರ್ಷದ ಬ್ರೆಜಿಲ್‌ನ ಮಹಿಳಾ ಪ್ರಯಾಣಿಕರೊಬ್ಬನ್ನು ತಡೆಹಿಡಿಯಲಾಯಿತು. ವಿಚಾರಣೆಯ ಸಮಯದಲ್ಲಿ, ಅವರು ಮಾದಕ ದ್ರವ್ಯಗಳು ಅಥವಾ ಸೈಕೋಟ್ರೋಪಿಕ್ ವಸ್ತುಗಳನ್ನು ಹೊಂದಿರುವ ಕ್ಯಾಪ್ಸುಲ್‌ಗಳು ಸೇವಿಸಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದರು ಎಂದು ಕಸ್ಟಮ್ಸ್ ಇಲಾಖೆ ಎಕ್ಸ್‌ನಲ್ಲಿ ತಿಳಿಸಿದೆ.

 

ನಂತರ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಮಹಿಳೆಯ ದೇಹದಲ್ಲಿ ಇದ್ದ 98 ಕ್ಯಾಪ್ಸುಲ್‌ಗಳನ್ನು ಹೊರತೆಗೆದಿದ್ದು, ಅದರಲ್ಲಿ 866 ಗ್ರಾಂ ಕೊಕೇನ್ ಪತ್ತೆಯಾಗಿದೆ. ಇದರ ಮೌಲ್ಯ ರೂ. 12.99 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಹೇಳಿದೆ. ಇದರ ನಂತರ ಅವರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.

ಕಸ್ಟಮ್ಸ್ ಅಧಿಕಾರಿಗಳು ಜನವರಿ 24 ರಂದು ಬ್ರೆಜಿಲ್‌ನಿಂದ ಬಂದ ಮತ್ತೊಬ್ಬ ಮಹಿಳಾ ಪ್ರಯಾಣಿಕರೊಬ್ಬರನ್ನು ತಡೆಹಿಡಿದಿದ್ದರು. ಅವರು ಕೂಡಾ ಸಾವೊ ಪಾಲೊದಿಂದ ಪ್ಯಾರಿಸ್ ಮೂಲಕ ಬಂದಿದ್ದರು. “ವಿಚಾರಣೆಯ ವೇಳೆ ಮಹಿಳೆಯು ಮಾದಕವಸ್ತು ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದಾಗಿ ಒಪ್ಪಿಕೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಹೊಟ್ಟೆಯಿಂದ 100 ಅಂಡಾಕಾರದ ಕ್ಯಾಪ್ಸುಲ್‌ಗಳನ್ನು ಹೊರತೆಗೆಯಲಾಗಿದೆ. ಇವುಗಳನ್ನು ಪರಿಶೀಲಿಸಿದಾದ ಅವುಗಳಲ್ಲಿ ಕೊಕೇನ್ ಎಂದು ಶಂಕಿಸಲಾದ ಬಿಳಿ ಪುಡಿ ಇತ್ತು” ಎಂದು ಕಸ್ಟಮ್ಸ್ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದೆ.

802 ಗ್ರಾಂ ತೂಕದ ವಶಪಡಿಸಿಕೊಂಡ ಮಾದಕವಸ್ತುಗಳ ಅಂದಾಜು ಮೌಲ್ಯ 12.03 ಕೋಟಿ ರೂ. ಎಂದು ಅದು ಹೇಳಿದೆ. “ಆರಂಭಿಕ ಪರೀಕ್ಷೆಗಳು ಹೆಚ್ಚಿನ ಶುದ್ಧತೆಯ ಕೊಕೇನ್ ಇರುವಿಕೆಯನ್ನು ದೃಢಪಡಿಸಿವೆ. ಇದು ಮಾದಕವಸ್ತುಗಳನ್ನು ಭಾರತಕ್ಕೆ ಸಾಗಿಸಲು ಪ್ರಯತ್ನಿಸುತ್ತಿರುವ ಅತ್ಯಾಧುನಿಕ ಕಳ್ಳಸಾಗಣೆ ಜಾಲವನ್ನು ಸೂಚಿಸುತ್ತದೆ” ಎಂದು ಕಸ್ಟಮ್ಸ್ ತಿಳಿಸಿದೆ.

 

ಜನವರಿ 24 ರಂದು ಅಡಿಸ್ ಅಬಾಬಾದಿಂದ ಬಂದಿದ್ದ ಕೀನ್ಯಾದ ವ್ಯಕ್ತಿಯೊಬ್ಬನನ್ನು ತಡೆಹಿಡಿಯಲಾಯಿತು. ವಿಚಾರಣೆ ಸಮಯದಲ್ಲಿ ತಾನು ಕೊಕೇನ್ ತುಂಬಿದ ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದಾಗಿ ಒಪ್ಪಿಕೊಂಡಿದ್ದನು. ಈ ವೇಳೆ ಅವರನ್ನು ಕೂಡಾ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರ ಹೊಟ್ಟೆಯಲ್ಲಿದ್ದ 14.94 ಕೋಟಿ ರೂ. ಮೌಲ್ಯದ 996 ಗ್ರಾಂ ಕೊಕೇನ್ ತುಂಬಿದ 67 ಕ್ಯಾಪ್ಸುಲ್‌ಗಳನ್ನು ಹೊರತೆಗೆಯಲಾಗಿದೆ.

“ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ಭಾರತಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದು, ಇದು ದೊಡ್ಡ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲದ ಭಾಗವಾಗಿ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಕಸ್ಟಮ್ಸ್ ಪ್ರತ್ಯೇಕ ಪೋಸ್ಟ್‌ನಲ್ಲಿ ತಿಳಿಸಿದೆ. ಮೂರೂ ಪ್ರಕರಣಗಳು ದೇಹದೊಳಗೆ ಮಾದಕ ವಸ್ತುಗಳನ್ನು ಇಟ್ಟು ಕಳ್ಳಸಾಗಣೆ ಮಾಡಲಾಗಿದೆ. ಇದು ಅತ್ಯಂತ ಹೆಚ್ಚು ಅಪಾಯಕಾರಿ ಕಳ್ಳಸಾಗಣೆ ವಿಧಾನವಾಗಿದೆ ಎಂದು ಅದು ಹೇಳಿದೆ.

 

“ಐಜಿಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ತ್ವರಿತ ಕ್ರಮವು 39.96 ಕೋಟಿ ರೂ. ಮೌಲ್ಯದ ಸುಮಾರು 2.66 ಕೆಜಿ ಕೊಕೇನ್ ಅನ್ನು ಭಾರತೀಯ ಮಾರುಕಟ್ಟೆಗಳಿಗೆ ಬರದಂತೆ ತಡೆಯಲಾಗಿದೆ! ಈ ಕಾರ್ಯಾಚರಣೆಗಳ ಹಿಂದಿನ ದೊಡ್ಡ ಜಾಲವನ್ನು ಪತ್ತೆಹಚ್ಚಲು ತನಿಖೆಗಳು ನಡೆಯುತ್ತಿವೆ” ಎಂದು ಪೋಸ್ಟ್ ಹೇಳಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement