Connect with us

ಅಭಿವೃದ್ಧಿ ಕಾರ್ಯಗಳು

34,ನೆಕ್ಕಿಲಾಡಿ,ಆದರ್ಶನಗರ ಬಹುಕಾಲದ ಬೇಡಿಕೆ..ಈಡೇರಿಕೆ.. ತಡೆಗೋಡೆ ಕಾಮಗಾರಿ ಪೂರ್ಣ

Published

on

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಆದರ್ಶನಗರದ ಜನತೆಯ ಬಹು ವರ್ಷದ ಬೇಡಿಕೆಯಾಗಿದ್ದ ತಡೆಗೋಡೆಗೆ ಶಾಸಕರಾದ ಅಶೋಕ್ ಕುಮಾರ್ ರೈಯವರು 6.89 ಲಕ್ಷ ರೂ. ಅನುದಾನ ನೀಡಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿಯು ಈಗ ಪೂರ್ಣಗೊಂಡಿದೆ. ತಡೆಗೋಡೆಯ ಒಂದು ಬದಿಗೆ ಮಣ್ಣು ಹಾಕುವ ಕೆಲಸ ಬಾಕಿಯಿದ್ದು, ಅದು ಆದ ಬಳಿಕ ತಡೆಗೋಡೆಯ ಮೇಲ್ಭಾಗದಲ್ಲಿ ಲಘು ವಾಹನಗಳು ಸಾಗುವಷ್ಟು ದಾರಿಯೂ ದೊರೆಯಲಿದೆ.


ಗುಡ್ಡ ಪ್ರದೇಶದಲ್ಲಿರುವ ಆದರ್ಶನಗರ ಕಾಲನಿಯಲ್ಲಿ ಮಳೆಗಾಲದಲ್ಲಿ ಧರೆ ಕುಸಿತ ಸಾಮಾನ್ಯವಾಗಿದ್ದು, ಇಲ್ಲಿದ್ದ ಕಾಲುದಾರಿಯೂ ಕುಸಿತಗೊಂಡು ಹಲವು ಮನೆಗಳವರಿಗೆ ನಡೆದಾಡಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನವರ ತಡೆಗೋಡೆ ನಿರ್ಮಾಣದ ಬೇಡಿಕೆಯನ್ನು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಅವರು ಶಾಸಕರಿಗೆ ತಿಳಿಸಿದ್ದು, ಕೂಡಲೇ ಸ್ಪಂದಿಸಿದ ಶಾಸಕರು 6.89 ಲಕ್ಷ ರೂ. ಅನುದಾನ ನೀಡಿದ್ದರು. ಅದರಂತೆ ಈಗ ತಡೆಗೋಡೆಯ ಕಾಮಗಾರಿ ಪೂರ್ಣಗೊಂಡಿದೆ.

 

ಬಿರಿಯಾನಿ ಊಟದ ಆತಿಥ್ಯ:
ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿಕೊಟ್ಟಿರುವುದಕ್ಕೆ ಖುಷಿ ಪಟ್ಟ ಆದರ್ಶನಗರದ ನಿವಾಸಿಗಳಾದ ನಾಸೀರ್ ಮತ್ತು ಇಬ್ರಾಹೀಂ ಅವರು ಗುತ್ತಿಗೆದಾರ ಸಂಸ್ಥೆಯ ಕೆಲಸದವರಿಗೆ ಫೆ.11ರಂದು ಮಧ್ಯಾಹ್ನ ಬಿರಿಯಾನಿ ಊಟದ ಆತಿಥ್ಯ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

 

 

ರಾಜಕೀಯ ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ:
ಕಾಮಗಾರಿ ವೀಕ್ಷಿಸಿ ಮಾಧ್ಯಮದೊಂದಿಗೆ ಮಾತನಾಡಿದ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಅಶೋಕ್ ಕುಮಾರ್ ರೈಯವರು ಶಾಸಕರಾದ ಮೇಲೆ ನೆಕ್ಕಿಲಾಡಿಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ತಡೆಗೋಡೆಯ ಬೇಡಿಕೆಯು ಈ ಭಾಗದವರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇಲ್ಲಿಗೆ ತಡೆಗೋಡೆಯ ಬಹಳ ಅಗತ್ಯವಿತ್ತು. ಈಗ ಒಂದು ಹಂತದ ತಡೆಗೋಡೆಗೆ ಅನುದಾನ ನೀಡಿರುವ ಶಾಸಕರು ಮತ್ತೆಯೂ ಇಲ್ಲಿ ಉಳಿಕೆಯಾಗಿರುವ ತಡೆಗೋಡೆಯ ಕಾಮಗಾರಿಗೆ ಅನುದಾನ ನೀಡುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಹಲವು ವರ್ಷಗಳ ಬೇಡಿಕೆಯಾಗಿದ್ದ ದರ್ಬೆ ರಸ್ತೆಗೂ 30 ಲಕ್ಷ ರೂ. ಅನುದಾನ ನೀಡಿದ್ದು, ಅಲ್ಲಿಯೂ ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಮೈಂದಡ್ಕ ಮತ್ತು ಬೀತಲಪ್ಪುವಿನಲ್ಲಿ ತಲಾ 1.25 ಲಕ್ಷ ರೂ. ವೆಚ್ಚದ ಹೈಮಾಸ್ಟ್ ಸೋಲಾರ್ ವಿದ್ಯುತ್ ದೀಪಗಳನ್ನು ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿರುವ ಮಂಜುನಾಥ ಭಂಡಾರಿಯವರ 1.25 ಲಕ್ಷ ರೂ. ಅನುದಾನದಲ್ಲಿ ನೆಕ್ಕಿಲಾಡಿ ಜಂಕ್ಷನ್‌ನಲ್ಲಿ ಹೈಮಾಸ್ಟ್ ಸೋಲಾರ್ ವಿದ್ಯುತ್ ದೀಪ ಅಳವಡಿಸಲಾಗಿದೆ. ಒಟ್ಟು ಈವರೆಗೆ ನೆಕ್ಕಿಲಾಡಿ ಗ್ರಾಮವೊಂದಕ್ಕೆ ರಸ್ತೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈಯವರು ಹತ್ತು ಕೋಟಿಯ 61 ಲಕ್ಷದ 10 ಸಾವಿರ ರೂಪಾಯಿ ಅನುದಾನವನ್ನು ನೀಡಿದ್ದಾರೆ. ಅನುದಾನ ನೀಡುವಾಗ ಅವರು ಯಾವುದೇ ರಾಜಕೀಯ, ಧರ್ಮ ಬೇಧ ಮಾಡಿಲ್ಲ. ಆದರೆ ಅಭಿವೃದ್ದಿಯನ್ನು ಸಹಿಸದ ರಾಜಕೀಯ ಮನೋಸ್ಥಿತಿಯುಳ್ಳ ನಮ್ಮ ಗ್ರಾಮದ ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ವ್ಯರ್ಥಾ ಪ್ರಯತ್ನ ಮಾಡುತ್ತಿದ್ದಾರೆ. ಅಂತವರು ರಾಜಕೀಯ ಬದಿಗೊತ್ತಿ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು. ನಮ್ಮ ಗ್ರಾಮ, ನಮ್ಮ ಊರು ಅಭಿವೃದ್ಧಿಯಾಗಬೇಕೆಂಬ ಮನೋಭಾವನೆ ನಮ್ಮೆಲ್ಲರಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.

 

ಈ ಸಂದರ್ಭ ಕಾಂಗ್ರೆಸ್ ಬೂತ್ ಅಧ್ಯಕ್ಷ ಅಬ್ದುಲ್ ಖಾದರ್, ಸ್ಥಳೀಯರಾದ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement