Published
1 month agoon
By
Akkare Newsಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾ.07) ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ಆಗಲಿದ್ದು, ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಇವರು ಪಾತ್ರರಾಗಲಿದ್ದಾರೆ.
ಬಜೆಟ್ ಮಂಡನೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ ಕೆಲವು ದಿನಗಳಿಂದ ನಮ್ಮ ಸಂಪುಟದ ಸಚಿವರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ರೈತ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಧರ್ಮಗಳ ಗುರುಗಳೊಂದಿಗೆ ಸಭೆ ನಡೆಸಿ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ.
ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ. ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಿದ್ದೇನೆ ಎನ್ನುವ ಭರವಸೆ ನನಗಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯ ಅವರು 3.71 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದರು, ಆದರೆ ಈ ಬಾರಿ ಬಜೆಟ್ ಗಾತ್ರ ಕೊಂಚ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಾರಿ 4 ಲಕ್ಷ ಕೋಟಿ ರೂಪಾಯಿಗೂ ಅಧಿಕ ಗಾತ್ರ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಐದು ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹಂಚಿಕೆಯೇ 52 ಸಾವಿರ ಕೋಟಿ ಮೀರಬಹುದು ಎನ್ನಲಾಗಿದೆ.
2024-25ನೇ ಸಾಲಿನ ಬಜೆಟ್ ಗಾತ್ರವು 3.71 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇ. 62ರಷ್ಟು ಮಾತ್ರ ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಅಂದಾಜು ಖರ್ಚು 70 ಪ್ರತಿಶತ ಆಗಲಿದೆ. ಹೀಗಿರುವಾಗ ಈ ಬಾರಿ 4 ರಿಂದ 4.5 ಲಕ್ಷ ಕೋಟಿವರೆಗೆ ಬಜೆಟ್ ಗಾತ್ರ ತಲುಪುವ ಸಾಧ್ಯತೆಯಿರುವುದರಿಂದ ರಾಜ್ಯದ ಜನರ ನಿರೀಕ್ಷೆಗಳು ಸಹ ದುಪ್ಪಟ್ಟಾಗಿವೆ.
ಪಂಚ ಗ್ಯಾರೆಂಟಿ ಯೋಜನೆಗಳಿಗೆ ಮಣೆ?
ಚುನಾವಣಾ ಪೂರ್ವದ ಭರವಸೆಗಳಾದ ಐದು ಗ್ಯಾರೆಂಟಿ ಯೋಜನೆಗಳನ್ನು ಈಗಾಗಲೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿ ಮಾಡಿದ್ದಾರೆ. ಆದರೆ ಇದೇ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ತೊಡಕಾಗಿವೆ ಎಂದು ಸ್ವಪಕ್ಷದವರಿಂದಲೂ ಆರೋಪಗಳು ಕೇಳಿಬಂದಿವೆ.
2024-25ನೇ ಸಾಲಿನ ಬಜೆಟ್‌ನಲ್ಲಿ ಐದು ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ 52,000 ಕೋಟಿ ರೂಪಾಯಿನಷ್ಟಿತ್ತು. ಆದ್ರೆ ಯೋಜನೆಗಳ ಫಲಾನುಭವಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಳವಾಗಬಹುದು.
ಈ ಸಲದ ಬಜೆಟ್‌ನಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ನಡುವೆ ಸಮತೋಲನ ಕಂಡುಕೊಳ್ಳಬೇಕಾಗಿರುವುದು ದೊಡ್ಡ ಸವಾಲಾಗಿದೆ. ಒಂದು ಕಡೆ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಸೇರಿ ಐದು ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವುದು. ಇನ್ನೊಂದೆಡೆ, ಮೂಲಸೌಕರ್ಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಾಲ ಪಡೆಯುವ ಅನಿವಾರ್ಯ ಕಂಡುಬಂದಿದೆ.