Published
1 month agoon
By
Akkare Newsಬೆಂಗಳೂರು: ಸೌಜನ್ಯ ಕೊಲೆ ಪ್ರಕರಣದ ಕುರಿತು ವಿಡಿಯೋ ಪ್ರಸಾರ ಮಾಡಿದ ಯೂಟ್ಯೂಬರ್ ಸಮೀರ್ ಎಂ ಡಿಗೆ ವಿಚಾರಣೆಗೆ ಹಾಜರಾಗುವಂತೆ ಬಳ್ಳಾರಿ ಪೊಲೀಸರು ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವಿಚಾರಣೆ ವೇಳೆ, “ಇಡೀಎಫ್ಐಆರ್ ನೀಡದೆ ವಿಚಾರಣೆ ಹಾಜರಾಗುವಂತೆ ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ ಸಮೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ವಿಡಿಯೋದಲ್ಲಿ ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತುಗಳನ್ನು ಆಡಿಲ್ಲ. ಆದರೂ, ಎಫ್‌ಐಆರ್ ಪ್ರತಿ ಇಲ್ಲದೆ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ” ಎಂದು ಪೀಠಕ್ಕೆ ಸಮೀರ್ ಪರ ವಕೀಲರು ವಿವರಿಸಿದರು. ಈ ವೇಳೆ ಪೀಠ, “ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜೊತೆಗೆ ಎಫ್‌ಐಆರ್ ಇರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಅಲ್ಲದೆ, ದೂರು ಯಾರು ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೂ ನೋಟಿಸ್ ನೀಡುವುದಕ್ಕೆ ಹೇಗೆ ಸಾಧ್ಯ?” ಎಂದು ಪೀಠ ಪ್ರಶ್ನಿಸಿತು.
ಇದಕ್ಕೆ ಸರ್ಕಾರದ ಪರ ವಕೀಲರು, ಅರ್ಜಿದಾರರನ್ನು ಬಂಧಿಸಿಲ್ಲ ಎಂದು ತಿಳಿಸಿದರು. ಇದಕ್ಕೆ ಪೀಠ, ನೋಟಿಸ್ ಜಾರಿ ಮಾಡಿದ್ದು ಹಾಜರಾಗದಿದ್ದರೆ ಮುಂದಿನ ನಡೆಯೇ ಬಂಧನ ಆಗುತ್ತಿತ್ತು. ನಿಯಮಗಳ ಪ್ರಕಾರ ನೋಟಿಸ್ ಜಾರಿ ಮಾಡದಿದ್ದಲ್ಲಿ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ಪೀಠ ಹೇಳಿತು.
“ಸ್ಥಾಪಿತ ಕಾನೂನಿನ ಪ್ರಕಾರ ನೋಟಿಸ್ ಜೊತೆಗೆ ಎಫ್‌ಐಆರ್ ಪ್ರತಿ ಲಗತ್ತಿಸಬೇಕು. ಇದನ್ನು ಉಲ್ಲಂಘಿಸಲಾಗಿದೆ. ಹೀಗಾಗಿ, ಮುಂದಿನ ವಿಚಾರಣೆವರೆಗೆ ನೋಟಿಸ್‌ಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಆದೇಶ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಅರ್ಜಿದಾರ ಸಮೀರ್ ಎಂಡಿ ಅವರು ಸೌಜನ್ಯ ಕೊಲೆ ಪ್ರಕರಣದ ಕುರಿತು ವೀಡಿಯೋ ಮಾಡಿದ್ದರು. ಈ ಸಂಬಂಧ ಬಳ್ಳಾರಿ ಜಿಲ್ಲೆಯ ಕೌಲ್‌ಬಜಾರ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಈ ಸಂಬಂಧ ಧಾರ್ಮಿಕ ಭಾವನೆ ಹೊಂದಿರುವ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿ ವೀಡಿಯೋ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಬುಧವಾರ ಸಮೀರ್ ಕಚೇರಿಗೆ ಭೇಟಿ ನೀಡಿದ್ದ ಪೊಲೀಸರು ಗುರುವಾರ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದರು. ಇದನ್ನು ಪ್ರಶ್ನಿಸಿ ಸಮೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಳ್ಳಾರಿ ಪೊಲೀಸರು ಮಾರ್ಚ್ 5ರ ರಾತ್ರಿ ನೋಟಿಸ್ ಜಾರಿಗೊಳಿಸಿ, ಗುರುವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಬಿಎನ್‌ಎಸ್‌ಎಸ್ ಸೆಕ್ಷನ್ 35(3) ಅಡಿ ನೋಟಿಸ್ ನೀಡಿರುವುದನ್ನು ವಜಾ ಮಾಡುವಂತೆ ಕೋರಿ ಸಮೀರ್ ಅರ್ಜಿಯನ್ನು ಸಲ್ಲಿಸಿದ್ದರು.