Connect with us

ಇತರ

ತಂದೆ-ತಾಯಿ ಹಾಗೂ ಹಿರಿಯ ನಾಗರೀಕರನ್ನು ಆರೈಕೆ ಮಾಡದಿದ್ದರೆ ಅವರ ಆಸ್ತಿಯಲ್ಲಿ ಪಾಲಿಲ್ಲ: ಕೃಷ್ಣ ಬೈರೇಗೌಡ

Published

on

ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007
• ಕೇಂದ್ರ ಸರ್ಕಾರದ ಕಾಯ್ದೆಯ ಬಗ್ಗೆ ಪರಿಷತ್ನಲ್ಲಿ ಮಾಹಿತಿ ನೀಡಿದ ಸಚಿವರು
• ಹಿರಿಯರನ್ನು ಆರೈಕೆ ಮಾಡದಿದ್ದರೆ ಅವರು ನೀಡಿದ ವಿಲ್-ದಾನಪತ್ರ ರದ್ದು
• ʼಎಸಿʼಗಳ ಹೆಗಲಿಗೆ ಹಿರಿಯ ನಾಗರೀಕರ ಹಕ್ಕನ್ನು ರಕ್ಷಿಸುವ ಹೊಣೆ

ಬೆಂಗಳೂರು: ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ, ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್-ಧಾನಪತ್ರವನ್ನು ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರದ “ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007” ನೀಡಿದೆ ಎಂದು ಪರಿಷತ್ನಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಬುಧವಾರ ವಿಧಾನ ಪರಿಷತ್ನಲ್ಲಿ ಸದಸ್ಯೆ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, “ಕೇಂದ್ರ ಸರ್ಕಾರದ “ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನೇ ಆರೈಕೆ ಮಾಡದಂತಹ ಹಲವರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದು ವೇಳೆ ಮಕ್ಕಳು ಅಥವಾ ಸಂಬಂಧಿಕರು ತಮ್ಮನ್ನು ಆರೈಕೆ ಮಾಡದಿದ್ದರೆ ಅವರ ಹೆಸರಿಗೆ ಮಾಡಿರುವ ವಿಲ್ ಅಥವಾ ಧಾನಪತ್ರವನ್ನು ರದ್ದು ಮಾಡುವ ಅಧಿಕಾರ ಹಿರಿಯ ನಾಗರೀಕರಿಗೆ ಇದೆ” ಎಂದು ಮಾಹಿತಿ ನೀಡಿದರು.

ಮುಂದುವರೆದು, “ ಕೇಂದ್ರ ಸರ್ಕಾರ 2007 ರಲ್ಲೇ ʼಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆʼ ಯನ್ನು ಜಾರಿಗೆ ತಂದಿದೆ. ಆದರೆ, ಈ ಬಗ್ಗೆ ಹಲವರಿಗೆ ಮಾಹಿತಿಯೇ ಇಲ್ಲ. ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದಲೇ ಪರಿಷತ್ನಲ್ಲಿ ಈ ಕಾಯ್ದೆಯ ಬಗ್ಗೆ ಉಲ್ಲೇಖಿಸುತ್ತಿದ್ದೇನೆ. ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರೀಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರೀಕರು ಸೆಕ್ಷನ್ 09ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು” ಎಂದು ತಿಳಿಸಿದರು.

“ಹಿರಿಯ ನಾಗರೀಕರ ದೂರು ಸಾಬೀತಾದರೆ, ತಂದೆ ತಾಯಿಯಿಂದ ಆಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ, ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ಧಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೇ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ. ಈ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಈಗಾಗಲೇ ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಲಾಗುತ್ತಿದೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ಅಪೀಲು ಹೋಗಲೂ ಸಹ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ” ಎಂದು ಸದನಕ್ಕೆ ಮಾಹಿತಿ ನೀಡಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement