Published
5 days agoon
By
Akkare Newsಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದ ಅತಿಕ್ರಮಿತ ಜಾಗವನ್ನು ದೇವಳದ ಸುಪರ್ದಿಗೆ ಪಡೆದುಕೊಳ್ಳಲಾಗುವುದು. ದೇವಳದ ಹೆಸರಲ್ಲಿರುವ ಸುಮಾರು 16.5 ಎಕರೆ ಜಾಗ ಬೇರೆಯವರ ಸ್ವಾಧೀನದಲ್ಲಿದೆ ಎಂದು ಶಾಸಕ ಅಶೋಕ್‌ಕಮಾರ್ ರೈ ಹೇಳಿದರು.
ದೇವಳದ ಹಿಂಬದಿಯ ದ್ವಾರದ ಬಳಿಯ ಮೂರು ಅಂಗಡಿಗಳನ್ನು ತೆರವು ಮಾಡುವ ಕಾರ್ಯ ಶನಿವಾರ ನಡೆದಿದ್ದು, ಈ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ತೆಂಕಿಲ, ನೆಲ್ಲಿಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಈ ಜಾಗಗಳಿದ್ದು, ಈಗಾಗಲೇ ಅಳತೆ ಮಾಡಲು ಆದೇಶ ಮಾಡಲಾಗಿದೆ. ದೇವಳದ ಜಾಗಗಳನ್ನು ಅತಿಕ್ರಮಣ ಮಾಡಿದವರಿಗೆ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಲಾಗಿದೆ. ದೇವಳಕ್ಕೆ ಸೇರಿದ ಜಾಗಗಳನ್ನು ದೇವಳದ ಸುಪರ್ದಿಗೆ ಪಡೆದುಕೊಂಡ ಬಳಿಕ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದ ಮಾದರಿಯಲ್ಲಿ ವಸತಿಗೃಹ, ವಾಣಿಜ್ಯಸಂಕೀರ್ಣ, ಛತ್ರ ನಿರ್ಮಿಸಲಾಗುವುದು ಎಂದರು.
ಪ್ರವಾಸಿಗಳಿಗೆ ಮೂಲಸೌಕರ್ಯ ಒದಗಿಸಬೇಕಿದ್ದು, ಪ್ರಸ್ತುತ ದೇವಳದ ಮುಂಭಾಗದಲ್ಲಿ ಭಾಗದಲ್ಲಿ ಹೆಚ್ಚಿನ ಜನಜಂಗುಳಿ ಉಂಟಾಗದಂತೆ ಮಾಡಲು ಮೂರು ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಅಂಗಡಿ ಮಾಲೀಕರಾದ ಕಿಶೋರ್ ಕೊಳತ್ತಾಯ, ಸುಬ್ರಹ್ಮಣ್ಯ ಕೊಳತ್ತಾಯ, ವಿಠಲ್ದಾಸ್ ಹೆಗ್ಡೆ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಇಚ್ಛೆಯಿಂದ ಈ ಅಂಗಡಿ ಜಾಗಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ದೇವಳದ ಸುತ್ತಮುತ್ತ ಇರುವ ಮನೆಗಳ ತೆರವು ಮಾಡಿದ ಬಳಿಕ ದೇವಾಲಯದ ವಾತಾವರಣವೇ ಬದಲಾಗಿದೆ. ಈ ತೆರವಾದ ಸ್ಥಳದಲ್ಲಿ ಈ ಬಾರಿ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಈ ಮೊದಲು ಜಾತ್ರೆಯ ಸಂದರ್ಭದಲ್ಲಿ ಅನ್ನಪ್ರಸಾದ ವಿತರಣೆ ಮಾಡುತ್ತಿದ್ದ ಜಾಗದಲ್ಲಿ ಈ ಬಾರಿ ನೂರು ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಏ.3ಕ್ಕೆ ಏಲಂ ಪ್ರಕ್ರಿಯೆ ನಡೆಯಲಿದೆ ಎಂದರು.
ಒಬ್ಬ ವ್ಯಕ್ತಿಗೆ ಕೇವಲ 2 ಅಂಗಡಿಗಳನ್ನು ಮಾತ್ರ ನೀಡುವ ಚಿಂತನೆ ಮಾಡಿದ್ದೇವೆ. ಅಂಗಡಿಗಳನ್ನು ₹ 15 ಸಾವಿರಕ್ಕೆ ಪಡೆದುಕೊಂಡು ₹ 40 ಸಾವಿರಕ್ಕೆ ಇನ್ನೊಬ್ಬರಿಗೆ ನೀಡಲು ಈ ಬಾರಿ ಬಿಡುವುದಿಲ್ಲ. ದೇವರ ಜಾತ್ರೆ ವೈಭವದಿಂದ ನಡೆಯಲು ಭಕ್ತರು ಸಹಕರಿಸಬೇಕು ಎಂದು ಅವರು ತಿಳಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ.ವಿ., ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಈಶ್ವರ ಬೇಡೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಹ್ಲಾದ್ ಬೆಳ್ಳಿಪ್ಪಾಡಿ ಭಾಗವಹಿಸಿದ್ದರು.