Published
3 days agoon
By
Akkare Newsಇಲ್ಲಿನ ಸ್ಥಿತಿ ಹೇಗಿದೆಯೆಂದರೆ, ಕಸದ ರಾಶಿ ತುಂಬಿ ತ್ಯಾಜ್ಯ ಮುಕ್ತ ಪುತ್ತೂರಿನ ನಿರ್ಮಾಣ ಅಸಾಧ್ಯ ಎನ್ನುವ ಸಂದೇಶ ರವಾನಿಸುವಂತಿದೆ. ಅಚ್ಚರಿಯೆಂದರೆ ದಿನಂಪ್ರತಿ ನೂರಾರು ವಾಹನಗಳು, ಜನರು ಸಂಚರಿಸುವ ರಸ್ತೆ ಬದಿಯಲ್ಲೇ ಈ ಸ್ಥಿತಿ ಇದ್ದು ತೆರವು ಪ್ರಕ್ರಿಯೆ ನಡೆಯದೇ ಹಲವು ತಿಂಗಳುಗಳೇ ಕಳೆದಿದೆ ಎನ್ನುತ್ತಿದೆ ಇಲ್ಲಿನ ಚಿತ್ರಣ.
ಗೇರು ತೋಟದ ಬದಿ
ಮೊಟ್ಟೆತ್ತಡ್ಕದ ರಾಷ್ಟ್ರೀಯ ಗೇರು ಸಂಶೋಧನ ನಿರ್ದೇಶನಾಲಯದಿಂದ ಅನತಿ ದೂರದ ಪ್ರದೇಶ ಇದಾಗಿದೆ. ಎಆರ್‌ಸಿಸಿಗೆ ಸೇರಿರುವ ಗೇರು ತೋಟದ ಬೇಲಿ ಪಕ್ಕದ ಚರಂಡಿಯಲ್ಲೇ ಕಸ, ತ್ಯಾಜ್ಯ ಎಸೆಯಲಾಗಿದೆ. ಇಲ್ಲಿ ಅರ್ಧ ಭಾಗ ಮುಂಡೂರು ಗ್ರಾ.ಪಂ.ಗೆ, ಇನ್ನರ್ಧ ಭಾಗ ನಗರಸಭೆಗೆ ಸೇರಿದ್ದು ಕಸದ ರಾಶಿ ಬಿದ್ದಿರುವ ಸ್ಥಳ ಮುಂಡೂರು ಗ್ರಾ.ಪಂ.ವ್ಯಾಪ್ತಿಗೆ ಸೇರಿದೆ ಎನ್ನುತ್ತಾರೆ ಸ್ಥಳೀಯರು.
ಚರಂಡಿಯುದ್ದಕ್ಕೂ ತ್ಯಾಜ್ಯ
ಪುತ್ತೂರಿಂದ ಮುಕ್ರಂಪಾಡಿ ಮೊಟ್ಟೆತ್ತಡ್ಕ ಪಂಜಳದ ಮೂಲಕ ತಿಂಗಳಾಡಿಯನ್ನು ಬೆಸೆಯುವ ರಸ್ತೆ ಇದಾಗಿದೆ. ಸರಕಾರಿ ಬಸ್ ಸಹಿತ ಹಲವು ವಾಹನಗಳ ಓಡಾಟದ ರಸ್ತೆಯಾಗಿದೆ. ರಸ್ತೆ ಬದಿಗಳಲ್ಲಿ ಇರುವ ತೆರೆದ ಚರಂಡಿಯಲ್ಲಿ ಪ್ಲಾಸ್ಟಿಕ್ ಕಸ, ತ್ಯಾಜ್ಯ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಎಸೆಯಲಾಗಿದೆ. ಅರ್ಧ ಕಿ.ಮೀ. ದೂರದ ತನಕ ಈ ತ್ಯಾಜ್ಯ ತುಂಬಿದ್ದು ಅದು ಭರ್ತಿಯಾಗಿ ರಸ್ತೆ ಬದಿಯಲ್ಲೂ ಎಸೆಯಲಾಗಿದೆ.
ಪತ್ತೆಗೆ ತಾಂತ್ರಿಕ ವ್ಯವಸ್ಥೆ ಇಲ್ಲ
ತಿಂಗಳಿಡೀ ಸ್ವಚ್ಛತ ಅಭಿಯಾನ ನಡೆದಿದ್ದರೂ ಈ ಪರಿಸರದಲ್ಲಿ ಕಸ ಹೆಕ್ಕಿದ್ದೇ ಇಲ್ಲ ಎನ್ನುತ್ತಿದೆ ಇಲ್ಲಿನ ಸ್ಥಿತಿ. ದಿನಂಪ್ರತಿ ಕಿಡಿಗೇಡಿಗಳು ಇಲ್ಲಿ ಕಸ, ತ್ಯಾಜ್ಯ ತಂದು ಎಸೆಯುತ್ತಿದ್ದು ಪತ್ತೆ ಕಾರ್ಯಕ್ಕೆ ಬೇಕಾದ ತಾಂತ್ರಿಕ ವ್ಯವಸ್ಥೆಗಳು ಇಲ್ಲಿಲ್ಲ. ರಸ್ತೆಯ ಎರಡು ಭಾಗಗಳಲ್ಲಿ ಗೇರು ತೋಟ ಇದ್ದು ಜನ ವಸತಿ ರಹಿತವಾಗಿರುವ ಕಾರಣ ಬೇಕಾಬಿಟ್ಟಿಯಾಗಿ ಕಸ ಎಸೆದು ಹೋಗುತ್ತಾರೆ.