Published
2 days agoon
By
Akkare Newsಶಿಕ್ಷಣ ಇಲಾಖೆಯು ಒಂದನೇ ತರಗತಿ ಪ್ರವೇಶದ ವಿಚಾರದಲ್ಲಿ ಪೋಷಕರಿಗೆ ಸಿಹಿಸುದ್ದಿ ನೀಡಿದೆ. ಇಲ್ಲಿವರೆಗೆ 1ನೇ ತರಗತಿಗೆ ಮಕ್ಕಳ ಪ್ರವೇಶಕ್ಕೆ ಇದ್ದ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಒಂದು ವರ್ಷಕ್ಕೆ ಅನ್ವಯವಾಗುವಂತೆ ಈ ಹೊಸ ನಿಯಮ ಜಾರಿ ಮಾಡಲಾಗಿದೆ. ಈ ವರ್ಷ 1ನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ 5 ವರ್ಷ 5 ತಿಂಗಳು ತುಂಬಿದ್ದರೂ ಸಾಕು ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಒಂದನೇ ತರಗತಿಗೆ ವಯೋಮಿತಿಯಲ್ಲಿ ಸಡಿಲಿಕೆ ಮಾಡಿರುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ.
ಮೊದಲು ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ಪೂರೈಸುವುದು ಕಡ್ಡಾಯ ಎಂಬ ನಿಯಮವಿತ್ತು. ಈಗ ಈ ನಿಯಮ ಸಡಿಲ ಮಾಡಲಾಗಿದೆ. ಅದರಂತೆ 5 ವರ್ಷ 5 ತಿಂಗಳ ವಯೋಮಾನದ ಮಕ್ಕಳು ನೇರವಾಗಿ ಒಂದನೇ ತರಗತಿಗೆ ಪ್ರವೇಶ ಪಡೆಯಬಹುದಾಗಿದೆ. ಈ ವರ್ಷಕ್ಕೆ ಅನ್ವಯವಾಗುವಂತೆ ಈ ನಿಯಮ ಜಾರಿಯಾಗಲಿದೆ. ಇದು ರಾಜ್ಯ ಪಠ್ಯಕ್ರಮಕ್ಕೆ ಮಾತ್ರವೇ ಅನ್ವಯವಾಗುತ್ತದೆ. ಸಿಬಿಎಸ್ಇ, ಐಸಿಎಸ್ಇ ಬೋರ್ಡ್ಗೆ ಈ ನಿಯಮ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ 6 ವರ್ಷ ತುಂಬಿದ ಮಕ್ಕಳಿಗೆ ಮಾತ್ರವೇ ಒಂದನೇ ತರಗತಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ಹೊಸ ನಿಯಮದಂತೆ ಅಂದ್ರೆ 5.5 ವರ್ಷವಾಗಿದ್ರೂ ಮಕ್ಕಳು ಪ್ರವೇಶ ಪಡೆಯಬಹುದಾಗಿದೆ. 1ನೇ ತರಗತಿಯ ಪ್ರವೇಶದ ಜೊತೆಗೆ ಎಲ್ಕೆಜಿ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿಯನ್ನು 4 ವರ್ಷಕ್ಕೆ ನಿಗದಿಪಡಿಸಲಾಗುತ್ತಿದೆ. ಒಂದನೇ ತರಗತಿಗೆ ಮಕ್ಕಳನ್ನು ಅಡ್ಮಿಷನ್ ಮಾಡುವ ಸಂದರ್ಭದಲ್ಲಿ ಪೋಷಕರು ಹಲವು ಗೊಂದಲಗಳಲ್ಲಿ ಸಿಲುಕಿದ್ದರು.
ಹುಟ್ಟಿದ ತಿಂಗಳ ಆಧಾರದ ಮೇಲೆ ಕೆಲ ಮಕ್ಕಳನ್ನು ಒಂದನೇ ತರಗತಿಗೆ ಸಕಾಲಕ್ಕೆ ಸೇರಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವಯೋಮಿತಿಯನ್ನು ಸಡಿಲಿಸುವಂತೆ ಪೋಷಕರು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದರು. ಇದಕ್ಕೆ ಕೊನೆಗೂ ಮಣಿದಿರುವ ಶಿಕ್ಷಣ ಇಲಾಖೆಯು ಪೋಷಕರ ಇಚ್ಛೆಯಂತೆ ಮಕ್ಕಳ ವಯೋಮಿತಿಯನ್ನು ಕಡಿಮೆ ಮಾಡಿದೆ. ಸದ್ಯ ಹಳೆ ನಿಯಮದ ಬಲದಾಗಿ ಏಳು ತಿಂಗಳ ಕಾಲ ವಯೋಮಿತಿ ಕಡಿಮೆ ಮಾಡಿ ಅವಕಾಶ ಕಲ್ಪಿಸಿದೆ.
ರಾಜ್ಯ ಶಿಕ್ಷಣ ನೀತಿ ಆಯೋಗವು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು ಸಲ್ಲಿಸಿತ್ತು. ಇದನ್ನು ಪರಿಶೀಲಿಸಿರುವ ಶಾಲಾ ಶಿಕ್ಷಣ ಇಲಾಖೆಯು ಈ ನಿರ್ಧಾರವನ್ನು ಪ್ರಕಟಿಸಿದೆ. ಶಾಲಾ ಶಿಕ್ಷಣ ಇಲಾಖೆಯು 2022ರಲ್ಲಿ ಹೊರಡಿಸಿದ್ದ ಆದೇಶದ ಪ್ರಕಾರ 2025ರ ಜೂನ್ 1ರೊಳಗೆ 6 ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು ಮಾತ್ರವೇ 2025-26ನೇ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿತ್ತು. ಇದರಿಂದ ಮಕ್ಕಳ ಪ್ರವೇಶಕ್ಕೆ ಭಾರಿ ಸಮಸ್ಯೆ ಎದುರಾದ ಕಾರಣ ಮೊದಲಿನಂತೆಯೇ ಇಚ್ಛೆಯನುಸಾರ ಪ್ರವೇಶಾತಿಗೆ ವಯೋಮಿತಿ ಸಡಿಲಿಸುವಂತೆ ಪೋಷಕರು ಕೋರಿದ್ದರು. ಈ ಬೇಡಿಕೆ ಈಡೇರಿದ್ದು, ಮಕ್ಕಳ ಪ್ರವೇಶಕ್ಕೆ ಇದ್ದ ಗೊಂದಲಗಳಿಗೆ ರಿಲೀಫ್ ಸಿಕ್ಕಿದೆ.