Published
2 days agoon
By
Akkare Newsಪುತ್ತೂರು ಸೀಮೆಯ ಒಡೆಯ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ಎ.17ರಂದು ರಾತ್ರಿ ನಡೆಯಲಿದೆ. ಎ. 10ರಿಂದ ಆರಂಭಗೊಂಡ ಜಾತ್ರೋತ್ಸವದ ಅತ್ಯಂತ ಪ್ರಮುಖ ಘಟ್ಟಕ್ಕೆ ಸಕಲ ಸಿದ್ಧತೆ, ಭದ್ರತೆಗಳನ್ನು ಮಾಡಲಾಗಿದೆ. ಎ.17ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯುತ್ತದೆ.ಪತಾಕೆ, ಅಷ್ಟ ದಿಕ್ಪಾಲಕರು, ಶಿಖರ ಕಲಶ, ಶ್ವೇತ ಚಕ್ರ ಮತ್ತು ಸತ್ತಿಗೆ ಅಳವಡಿಸಿದ 70 ಅಡಿ ಎತ್ತರದ ಬ್ರಹ್ಮರಥದಲ್ಲಿ ವರ್ಷದಲ್ಲಿ ಒಂದು ದಿನ ಶ್ರೀ ದೇವರು ವಿರಾಜಮಾನರಾಗುತ್ತಾರೆ. ದೇವಾಲಯದ ಮುಂಭಾಗದ ರಥ ಬೀದಿಯಲ್ಲಿ 400 ಮೀ. ಉದ್ದಕ್ಕೆ ಬ್ರಹ್ಮರಥ ತೆರಳಿ ಮತ್ತೆ ದೇವಾಲಯದ ಭಾಗಕ್ಕೆ ಹಿಂದಿರುಗಿ ಬರುತ್ತದೆ. ಬ್ರಹ್ಮವಾಹಕರು ಮಹಾಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಬ್ರಹ್ಮರಥವನ್ನು ಏರುವ ಸಮಯ ಪುತ್ತೂರು ಸೀಮೆಯ ಜನರಿಗೆ ಅಪೂರ್ವ ಧಾರ್ಮಿಕ ಕ್ಷಣವಾಗಿದೆ.
ಇಂದು ಬಟ್ಟಲು ಕಾಣಿಕೆ
ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಉತ್ಸವ, ಸಿಡಿಮದ್ದು ಪ್ರದರ್ಶನ, ಬ್ರಹ್ಮರಥೋತ್ಸವ, ಬಂಗಾರ್‌ಕಾಯರ್ ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಬೀಳ್ಕೊಡುಗೆ, ಶ್ರೀಭೂತಬಲಿ, ಶಯನ ನಡೆಯಲಿದೆ.
ಹೆಚ್ಚುವರಿ ಬಸ್ ಓಡಾಟ
ಎ.17ರಂದು ಪುತ್ತೂರು ಜಾತ್ರೆಗೆ ಬರುವವರಿಗೆ ಮತ್ತು ಜಾತ್ರೆ ಮುಗಿಸಿ ರಾತ್ರಿ ಮರಳುವವರಿಗೆ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ಸುಗಳ ಓಡಾಟ ವ್ಯವಸ್ಥೆ ಕಲ್ಪಿಸಲಾಗಿದೆ. ವಿಟ್ಲ, ಉಪ್ಪಿನಂಗಡಿ, ಕಾಣಿಯೂರು, ಬೆಳ್ಳಾರೆ, ಈಶ್ವರಮಂಗಲ ಮೊದಲಾದೆಡೆ ಸಂಜೆ ವೇಳೆ ನಿಲುಗಡೆ ಇರುವ ಬಸ್‌ಗಳು ಅರ್ಧ ಗಂಟೆಗೊಮ್ಮೆ ಓಡಾಡಲಿವೆ ಎಂದು ಪುತ್ತೂರು ಘಟಕಾಧಿಕಾರಿ ತಿಳಿಸಿದ್ದಾರೆ.
ಕಣ್ಗಾವಲಿಗೆ 44 ಸಿಸಿ ಕೆಮರಾ
ಬ್ರಹ್ಮರಥೋತ್ಸವ, “ಪುತ್ತೂರು ಬೆಡಿ’ ಪ್ರದರ್ಶನ ಸಂದರ್ಭ ಲಕ್ಷಾಂತರ ಮಂದಿ ಭಕ್ತರು ಸೇರಲಿದ್ದು ಸುರಕ್ಷತೆಯ ದೃಷ್ಟಿಯಿಂದ 44ಕ್ಕೂ ಹೆಚ್ಚು ಸಿಸಿ ಕೆಮರಾಗಳ ಕಣ್ಗಾವಲು ಇರಿಸಲಾಗಿದೆ. ಮೂರು ಕಡೆಗಳಲ್ಲಿರುವ ಪ್ರವೇಶ ದ್ವಾರ, ಕೊಂಬೆಟ್ಟು ರಸ್ತೆ, ನೆಲ್ಲಿಕಟ್ಟೆ ರಸ್ತೆ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಸ್ತೆ, ಮಹಾಲಿಂಗೇಶ್ವರ ದೇಗುಲದ ಕೆರೆಯ ಬಳಿಯ ರಸ್ತೆ, ಮುಖ್ಯರಸ್ತೆ ಮೊದಲಾದೆಡೆ ಒಟ್ಟು ಕೆಮಾರ ಅಳವಡಿಸಲಾಗಿದೆ. ದೇಗುಲದ ಬ್ರಹ್ಮರಥ ಮಂದಿರದ ಬಳಿ ಟಿಟಿ ವಾಹನವೊಂದರಲ್ಲಿ ಎಲ್ಲ ಸಿಸಿ ಕೆಮರಾಗಳ ಕಂಟ್ರೋಲ್ ರೂಂ ವ್ಯವಸ್ಥೆ ಕಲ್ಪಿಸಲಾಗಿದೆ. ಅವಭೃಥ ನಡೆಯುವ ವೀರಮಂಗಲದ ನದಿ ಬಳಿಯೂ ಕಣ್ಗಾವಲಿದೆ.
ಜಾತ್ರೆ ಪ್ರಯುಕ್ತ ಬುಧವಾರ ಮುಸ್ಸಂಜೆ ಹೊತ್ತು ಐದು ಕಿ.ಮೀ. ದೂರದ ಬಲ್ನಾಡಿನಿಂದ ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ಶ್ರೀ ದೇಗುಲಕ್ಕೆ ಆಗಮಿಸಿತ್ತು. ಸೂಟೆ ಬೆಳಕಿನಲ್ಲಿ ಉಳ್ಳಾಲ್ತಿ ದೈವಗಳ ಕಿರುವಾಳು ಭಂಡಾರ ಬಲ್ನಾಡು ದೈವಸ್ಥಾನದಿಂದ ಹೊರಟಿತ್ತು. ದೇಗುಲಕ್ಕೆ ತಲುಪುವ ದಾರಿಯುದ್ದಕ್ಕೂ ಭಕ್ತರು ಹಣ್ಣುಕಾಯಿ ಸೇವೆ ಸಮರ್ಪಿಸಿದರು.
ದೇವಾಲಯಕ್ಕೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳಿಂದ ಆಗಮಿಸಿದ ಸಂದರ್ಭದಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಹೂವನ್ನು ದೈವಗಳಿಗೆ ಬಲ್ನಾಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಣೆ ಮಾಡಿದರು. ಮಲ್ಲಿಗೆಯನ್ನು ಉಳ್ಳಾಲ್ತಿಗೆ ಸಮರ್ಪಿಸಿ ಪ್ರಸಾದ ರೂಪದಲ್ಲಿ ಹಂಚಲಾಯಿತು. ದೇಗುಲದಿಂದ ಒಂದು ಫರ್ಲಾಂಗು ದೂರದಲ್ಲಿ ಇರುವ ಪ್ರಾಚೀನ ಕಟ್ಟೆಯಲ್ಲಿ ಉಳ್ಳಾಲ್ತಿ ಭಂಡಾರ ಇರಿಸಿದಾಗ ಅಲ್ಲಿಯೂ ರಾಶಿ ರಾಶಿ ಮಲ್ಲಿಗೆ ಸಮರ್ಪಣೆ ನಡೆಯಿತು.
ಮಲ್ಲಿಗೆ ಮಾರಾಟ
ನಗರದ ಮಹಿಳಾ ಠಾಣೆ ಇಕ್ಕೆಲ ರಸ್ತೆ ಸಹಿತ ನಾನಾ ಕಡೆಗಳಲ್ಲಿ ಬುಧವಾರ ಮಧ್ಯಾಹ್ನದ ಅನಂತರವೇ ಮಲ್ಲಿಗೆ ಮಾರಾಟ ನಡೆಯಿತು. ಸಾವಿರಾರು ಅಟ್ಟಿ ಮಲ್ಲಿಗೆ ಮಾರಾಟವಾಗಿದೆ.
74 ಮಂದಿಯಿಂದ ತುಲಾಭಾರ ಸೇವೆ
ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿ ತಮ್ಮ ಕಾರ್ಯಗಳಲ್ಲಿ ಯಶಸ್ವಿಯಾದ ಬಳಿಕ ಹರಕೆ ಹೊತ್ತ ಭಕ್ತರು ತುಲಾಭಾರ ಸೇವೆಗೈಯ್ಯುವ ಪದ್ಧತಿ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಅಕ್ಕಿ, ತೆಂಗಿನಕಾಯಿ, ಸಕ್ಕರೆ, ಬಾಳೆಗೊನೆ, ಸೀಯಾಳ, ತುಪ್ಪ, ಎಣ್ಣೆಯ ತುಲಾಭಾರ ನಡೆಯುತ್ತದೆ. ದೇವಾಲಯದಲ್ಲಿ ಜಾತ್ರಾ ಸಂದರ್ಭದಲ್ಲಿ ಬ್ರಹ್ಮ ರಥೋತ್ಸವದ ಮುನ್ನಾದಿನ ಮತ್ತು ಮರುದಿನ ಹೀಗೆ ವರ್ಷದಲ್ಲಿ ಎರಡೇ ಬಾರಿ ತುಲಾಭಾರ ಸೇವೆ ನಡೆಯುವುದು. ಬುಧವಾರ ನಡೆದ ಕಾರ್ಯಕ್ರಮದಲ್ಲಿ 74 ಮಂದಿ ತುಲಾಭಾರ ಸೇವೆ ಸಲ್ಲಿಸಿದರು.
ಕ್ಷೇತ್ರದ ತಂತ್ರಿ ಕುಂಟಾರು ರವೀಶ್ ತಂತ್ರಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಸಂತ ಕುಮಾರ್ ಕೆದಿಲಾಯ, ಬಿ.ಈಶ್ವರ್ ಬೆಡೇಕರ್, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ದಿನೇಶ್ ಕುಲಾಲ್ ಪಿ.ವಿ., ಮಹಾಬಲ ರೈ ವಳತ್ತಡ್ಕ, ಸುಬಾಶ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾರ್ ಸುವರ್ಣ ಬಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ ಉಪಸ್ಥಿತರಿದ್ದರು.
ದೀಪ ಬಲಿ ಉತ್ಸವ
ಎ.16ರಂದು ಬೆಳ್ಳಿ ಮೂಡುವ ಹೊತ್ತಿಗೆ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯಿತು. ಮಂಗಳವಾರ ರಾತ್ರಿ ಪೇಟೆ ಸವಾರಿಗೆ ತೆರಳಿದ ಶ್ರೀ ದೇವರು ದೇವಾಲಯಕ್ಕೆ ಮರಳಿದ ಬಳಿಕ ತಡರಾತ್ರಿ ಉತ್ಸವ ಮುಗಿದು ಅನಂತರ ಬ್ರಹ್ಮವಾಹಕರು, ತಂತ್ರಿಗಳು ಸೇರಿದಂತೆ ಉತ್ಸವಕ್ಕೆ ಸಂಬಂಧಿಸಿದವರು ಬೆಳ್ಳಿ ಮೂಡುವ ಮೊದಲೇ ಸ್ನಾನ ಮಾಡಿ ಮಡಿಯುಟ್ಟು ದೀಪ ಬಲಿ ಉತ್ಸವಕ್ಕೆ ಸಿದ್ಧರಾಗಿ ಬಳಿಕ ದೀಪ ಹಚ್ಚಿ ದೇವರ ಬಲಿ ನಡೆಯಿತು.