Published
7 hours agoon
By
Akkare Newsಬೆಂಗಳೂರು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಆರೋಗ್ಯವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಚಾರಿಸಿದ್ದಾರೆ.
ಶನಿವಾರ ಸಂಜೆ ರಿಕ್ಕಿ ರೈಗೆ ಕರೆ ಮಾಡಿರುವ ಡಿಕೆಶಿ, ಘಟನೆ ಹೇಗಾಯ್ತು ಎಂದು ಮಾಹಿತಿ ಪಡೆದುಕೊಂಡಿದ್ದಾರೆ.
ಆರೋಪಿಗಳು ಯಾರೇ ಆಗಿದ್ದರೂ ಪೊಲೀಸರು ಪತ್ತೆ ಹಚ್ಚುತ್ತಾರೆ. ನಾನು ಗೃಹ ಇಲಾಖೆ ಜೊತೆಗೆ ಪ್ರಕರಣದ ಬಗ್ಗೆ ಮಾತನಾಡುತ್ತೇನೆ. ಪೊಲೀಸರು ಆರೋಪಿಗಳನ್ನ ಪತ್ತೆ ಮಾಡುತ್ತಾರೆ. ನೀನು ಆರೋಗ್ಯದ ಕಡೆ ಗಮನ ಕೊಡು ಎಂದು ಸಾಂತ್ವನ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಪೊಲೀಸರ ತನಿಖೆ ನಡುವೆ ಡಿಸಿಎಂ ಆರೋಗ್ಯ ವಿಚಾರಿಸಿರುವುದು ಆತ್ಮಬಲ ಹೆಚ್ಚಿಸಿದೆ ಎಂದು ರಿಕ್ಕಿ ರೈ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಡ್ರೈವರ್ ಮತ್ತು ಗನ್ಮ್ಯಾನ್ ಜೊತೆಗೆ ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಮೂಗು ಹಾಗೂ ತೋಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.