Connect with us

ಇತರ

ಜಾತಿಗಣತಿಯಿಂದ ದುರ್ಬಲ ವರ್ಗಗಳಿಗೆ ಸಹಾಯ: ಮಾಜಿ ಸಚಿವ ರಮಾನಾಥ ರೈ

Published

on

ಮಂಗಳೂರಿ(ಏ.20): ಪ್ರಜಾಪ್ರಭುತ್ವದ ಸಮಾನತೆಯ ಆಶಯಕ್ಕೆ ಪೂರಕವಾಗಿ ನಡೆದಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯಿಂದ ರಾಜ್ಯದ ಬಹುಸಂಖ್ಯಾತ ದುರ್ಬಲ ವರ್ಗದವರಿಗೆ ಸಹಾಯ ಆಗಲಿದೆ. ಇದಕ್ಕೆ ವಿರೋಧ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು- ಜಯಪ್ರಕಾಶ್‌ ಹೆಗ್ಡೆ ವರದಿ ಇನ್ನೂ ಮಂಡನೆಯೇ ಆಗಿಲ್ಲ. ಒಂದು ವೇಳೆ ಗಣತಿಯ ದತ್ತಾಂಶ ಸರಿಯಿಲ್ಲ ಎಂದಾದರೆ ಸರಿಪಡಿಸುವ ಕೆಲಸ ಮಾಡಬಹುದು. ಆದರೆ ವರದಿ ಮಂಡನೆ ಆಗದೆ, ವಿಚಾರವೇ ಗೊತ್ತಿಲ್ಲದೆ ವಿರೋಧ ಮಾಡುವುದನ್ನು ಒಪ್ಪಲಾಗದು.

 

ಜಾತಿ ಗಣತಿ ಮಾಡುವುದು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಭರವಸೆ. ಸಮಾಜದಲ್ಲಿರುವ ಅಸಮಾನತೆಯನ್ನು ದೂರ ಮಾಡುವುದೇ ಇದರ ಉದ್ದೇಶ ಎಂದರು. ಈ ಹಿಂದೆ ಭೂಮಸೂದೆ ಕಾನೂನು, ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದಾಗಲೂ ಆಗಿನ ಜನಸಂಘ ಮತ್ತಿತರ ಪಕ್ಷಗಳು ವಿರೋಧ ಮಾಡಿದ್ದವು. ಆದರೆ ಈ ಕಾನೂನುಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದರು. ಈಗ ಜಾತಿ ಗಣತಿಯೂ ಬಡವರ ಪರವಾಗಿರುವ ನಿರ್ಧಾರಗಳಲ್ಲಿ ಒಂದು ಎಂದು ರಮಾನಾಥ ರೈ ಹೇಳಿದರು.

 

ಜಯಪ್ರಕಾಶ್‌ ಹೆಗ್ಡೆ ಆಯೋಗವನ್ನು ಬಿಜೆಪಿ ಸರ್ಕಾರ ಇದ್ದಾಗ ನೇಮಕ ಮಾಡಲಾಗಿತ್ತು. ಆದರೂ ರಾಜಕೀಯ ಕಾರಣಕ್ಕಾಗಿ ಬಿಜೆಪಿ, ಜೆಡಿಎಸ್‌ನವರು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ಸಚಿವರಿಂದ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ರೈ, ಜಾತಿ ಗಣತಿ ಕಾಂಗ್ರೆಸ್‌ ಪಕ್ಷದ ನಿಲುವು. ಒಳ ಮೀಸಲಾತಿಗೂ ಸಂಬಂಧಿಸಿ ಸಮಿತಿ ರಚನೆಗೆ ಆಗಿದ್ದು, ಮುಂದೆ ಆ ಬಗ್ಗೆಯೂ ಚರ್ಚೆಯಾಗಲಿದೆ ಎಂದರು.

 

 

ಜಿ.ಪಂ., ತಾಪಂ. ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ವಿಳಂಬಗತಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾಲ್ಕು ವರ್ಷಗಳ ಕಾಲ ಚುನಾವಣೆ ವಿಳಂಬ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ. ಇದೀಗ ಕಾಂಗ್ರೆಸ್‌ ಸರ್ಕಾರ ಕ್ರಮ ವಹಿಸುತ್ತಿದ್ದು, ಮನಪಾ ಸೇರಿದಂತೆ ಜಿಪಂ ತಾಪಂ ಚುನಾವಣೆ ಯಾವುದೇ ಸಂದರ್ಭದಲ್ಲೂ ಘೋಷಣೆಯಾಗಬಹುದು ಎಂದು ಹೇಳಿದರು. ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್‌ ಸಾಲಿಯಾನ್‌, ಇಬ್ರಾಹಿಂ, ಸುಖಿಂದರ್‌, ಅಬ್ಬಾಸ್‌ ಅಲಿ, ವಿಕಾಸ್‌ ಶೆಟ್ಟಿ ಇದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement