Published
9 hours agoon
By
Akkare Newsನಗರದ ರೊಸಾರಿಯೊ ಕಾಲೇಜಿನ ಹಿಂಭಾಗದ ಗೋದಾಮು ಒಂದರಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಸುಮಾರು 500 ಕ್ವಿಂಟಲ್ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರಿಂದ ಬಂದ ದೂರು ಆಧರಿಸಿ, ಇಲಾಖೆಯ ಉಪನಿರ್ದೇಶಕಿ ಅನಿತಾ ವಿ. ಮಡ್ಲೂರು ನೇತೃತ್ವದಲ್ಲಿ ಸೋಮವಾರ ಅಧಿಕಾರಿಗಳು ದಾಳಿ ನಡೆಸಿದರು.
ಅನುಪಮಾ ಎಂಟರ್ ಪ್ರೈಸಸ್‌ಗೆ ಸೇರಿದ ಬಾಡಿಗೆ ಗೋದಾಮಿನಲ್ಲಿ ಬೇರೆ ಬೇರೆ ಬ್ರ್ಯಾಂಡ್‌ಗಳ ಬಾಸುಮತಿ, ಸೋನಾ ಮಸೂರಿ, ಜೀರಾ ಅಕ್ಕಿ, ಕುಚ್ಚಲಕ್ಕಿ ಚೀಲಗಳು ಇದ್ದವು. ಇವುಗಳ ಜೊತೆಗೆ ಯಾವುದೇ ಬ್ರ್ಯಾಂಡ್ ನಮೂದು ಮಾಡದ ಬಿಳಿ ಚೀಲಗಳಲ್ಲೂ ಅಕ್ಕಿ ದಾಸ್ತಾನು ಇತ್ತು. ಇದರಲ್ಲಿ ಪಡಿತರ ಅಕ್ಕಿ ಇರುವ ಸಾಧ್ಯತೆಯೂ ಇರುವುದರಿಂದ ಎಲ್ಲವನ್ನೂ ವಶಕ್ಕೆ ಪಡೆದು, ಅಗತ್ಯವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅನಿತಾ ವಿ. ಮಡ್ಲೂರು ಮಾಹಿತಿ ನೀಡಿದರು.
ಉತ್ತರ ಕರ್ನಾಟಕದ ಭಾಗದಿಂದ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ತಂದು ಪಾಲಿಶ್ ಮಾಡಿ, ಇಲ್ಲಿ ಬೇರೆ ಬ್ರ್ಯಾಂಡ್ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳೂ ಬಂದಿದ್ದವು. ವಶಪಡಿಸಿಕೊಂಡಿರುವ ಅಕ್ಕಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಪರಿಶೀಲಿಸಲಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ದಾಸ್ತಾನು ಮಾಡಲು ಗೋದಾಮಿನವರು ಅನುಮತಿ ಹೊಂದಿದ್ದಾರೆಯೇ ಎಂಬ ಕುರಿತು ಸಹ ಪರಿಶೀಲಿಸಲಾಗುವುದು’ ಎಂದು ಹೇಳಿದರು. ಈ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧಿಕೃತವಾಗಿ ಅಕ್ಕಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.