Published
20 hours agoon
By
Akkare Newsಬೆಳ್ಳಾರೆ: ಆರು ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ತನ್ನ ತಾಯಿಯ ಸಾವಿಗೆ ಕಾರಣವಾದ ಆರೋಪಿಗೆ ಶಿಕ್ಷೆ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕ್ಯಾಮಣ ಗ್ರಾಮದ ಅಂಕಜಾಲು ನವಗ್ರಾಮ ಕಾಲನಿ ನಿವಾಸಿ ಗೋಪಾಲ ಯಾನೆ ಗೋಪ ಶಿಕ್ಷೆಗೆ ಒಳಗಾದ ಆರೋಪಿ. ಈತ 2019ರಲ್ಲಿ ರಾತ್ರಿ 11ರ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ತನ್ನ ತಾಯಿ ಚೀಂಕು ಅವರೊಂದಿಗೆ ಜಗಳವಾಡಿ ಕಲ್ಲಿನಿಂದ ಹೊಡೆದ ಪರಿಣಾಮ ಚೀಂಕು ಗಂಭೀರ ಗಾಯಗೊಂಡಿದ್ದರು. ಆಬಳಿಕ ಆರೋಪಿ ತನ್ನ ತಾಯಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ನಿರ್ಲಕ್ಷ್ಯ ವಹಿಸಿದ್ದರಿಂದ ಆಕೆ ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿ ಆರೋಪಿ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳ್ಳಾರೆ ಠಾಣಾ ಪೊಲೀಸ್ ಉಪನಿರೀಕ್ಷಕರಾಗಿದ್ದ ಈರಯ್ಯ ಡಿ.ಎನ್., ಸುಳ್ಯ ವೃತ ನಿರೀಕ್ಷಕರಾಗಿದ್ದ ಸತೀಶ್ ಕುಮಾರ್ ಆರ್.ತನಿಖೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಈ ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ, ಪ್ರತಿವಾದವನ್ನು ಆಲಿಸಿ ವೈಯಕ್ತಿಕ ಸಾಕ್ಷ್ಯ ಪರಿಗಣಿಸಿ ಆರೋಪಿತ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮಂಗಳೂರು ನ್ಯಾಯಾಧೀಶೆ ಸರಿತಾ ಡಿ. ಅವರು ಆರೋಪಿಗೆ 5 ವರ್ಷ ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸುವಂತೆ ಆದೇಶಿಸಿ ಎ. 29ರಂದು ತೀರ್ಪು ನೀಡಿದ್ದಾರೆ.