Published
12 hours agoon
By
Akkare Newsಜೂನ್ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ 3614 ಕಂದಾಯ ಗ್ರಾಮಗಳಿಗೂ ಅಂತಿಮ ಅಧಿಸೂಚನೆ ಹೊರಡಿಸಿ, ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಹಕ್ಕುಪತ್ರ ನೀಡುವ ಮೂಲಕ ಬಡವರ ಕೆಲಸವನ್ನು ಈ ವರ್ಷದೊಳಗೆ ಮುಗಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಶನಿವಾರ ಗಡುವು ನಿಗದಿಗೊಳಿಸಿದ್ದಾರೆ. ಮೇ 20ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಜನರಿಗೆ ಹಕ್ಕುಪತ್ರ ಸರ್ಕಾರ ವಿತರಿಸಲಿದ್ದು, ವರ್ಷಾಂತ್ಯದೊಳಗೆ 2 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಶನಿವಾರ ವಿಕಾಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ ಅವರು, “ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕಡು ಬಡವರಿಗೆ ಕಂದಾಯ ಗ್ರಾಮಗಳನ್ನು ರಚಿಸಿ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದಲೇ 2017 ರಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಆದರೆ ಅನುಷ್ಠಾನ ಈವರೆಗೆ ಪೂರ್ಣಗೊಳ್ಳದಿರುವುದು ದುರಾದೃಷ್ಟ. ಈ ಹಿಂದೆ ಹಲವರಿಗೆ ಹಕ್ಕುಪತ್ರ ನೀಡಿದ್ದರೂ, ಇನ್ನೂ ಆಗಬೇಕಾದ ಕೆಲಸ ಸಾಕಷ್ಟು ಬಾಕಿ ಇದೆ” ಎಂದು ವಿಷಾದಿಸಿದ್ದಾರೆ.
ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ರಾಜ್ಯಾದ್ಯಂತ 3,614 ಕಂದಾಯ ಗ್ರಾಮಗಳಿದ್ದು, ಈವರೆಗೆ 2600 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ 1400 ಗ್ರಾಮಗಳ ರಚನೆ ಆಗಿದ್ದರೆ, ಕಳೆದ ಎರಡು ವರ್ಷದ ಅವಧಿಯಲ್ಲಿ 1,200 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ವಾಸ್ತವದಲ್ಲಿ ಇನ್ನೂ 1014 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಬಾಕಿ ಇದೆ” ಎಂದು ಹೇಳಿದ್ದಾರೆ.
ಮುಂದುವರೆದು ”ಕೇಂದ್ರ ಸರ್ಕಾರ ದೇಶದಾದ್ಯಂತ ಜನಗಣತಿ ಆರಂಭಿಸುವುದಾಗಿ ಘೋಷಿಸಿದೆ. ಜನಗಣತಿ ಆರಂಭವಾದರೆ ಜುಲೈ ತಿಂಗಳಿನಿಂದ ಕೇಂದ್ರ ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಲು ಅವಕಾಶ ನೀಡುವುದಿಲ್ಲ. ಪರಿಣಾಮ ಬಡವರ ಅತಿಮುಖ್ಯ ಕೆಲಸಕ್ಕೆ ತೊಡಕುಂಟಾಗುವ ಸಾಧ್ಯತೆ ಇದೆ. ಹೀಗಾಗಿ ಬಾಕಿ ಇರುವ 1014 ಗ್ರಾಮಗಳಿಗೂ ಇದೇ ವರ್ಷದ ಜೂನ್ ಅಂತ್ಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸಿ ಜುಲೈ ನಂತರ ಹಕ್ಕುಪತ್ರ ವಿತರಿಸಿ. ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ ಮಾತಿನಂತೆ ಈ ಕೆಲಸವನ್ನು ಈ ವರ್ಷಾಂತ್ಯದೊಳಗೆ ಮುಗಿಸಿ” ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸಮಯದ ಗಡುವು ನಿಗದಿಪಡಿಸಿದ್ದಾರೆ.