Published
18 hours agoon
By
Akkare Newsಪಾಟ್ನಾ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತ ನಿನ್ನೆ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದೆ. ಈ ಐತಿಹಾಸಿಕ ದಿನದಂದೇ ಬಿಹಾರದಲ್ಲಿ ಜನಿಸಿದ ಹೆಣ್ಣು ಶಿಶುವಿಗೆ ಪೋಷಕರು ಸಿಂಧೂರ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ.
ಹೌದು, ಬಿಹಾರದ ಕತಿಹಾರ್ ಜಿಲ್ಲೆಯ ಒಂದು ಸಣ್ಣ ಆಸ್ಪತ್ರೆಯಲ್ಲಿ ಕುಂದನ್ ಕುಮಾರ್ ಮಂಡಲ್ ಎಂಬ ವ್ಯಕ್ತಿ ತನ್ನ ನವಜಾತ ಮಗಳಿಗೆ ಸಿಂಧೂರ್ ಎಂದು ಹೆಸರಿಟ್ಟು ಭಾರತೀಯ ಸೇನೆಯ ಐತಿಹಾಸಿಕ ಕಾರ್ಯಾಚರಣೆಗೆ ಗೌರವ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡಲ್ ಮುಗ್ಧ ಜೀವಗಳ ನಷ್ಟಕ್ಕೆ ಪ್ರತೀಕಾರ ತೀರಿಸಿಕೊಂಡ ಮತ್ತು ರಾಷ್ಟ್ರಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಸಿಂಧೂರ್ ಅವರ ಚಿಕ್ಕಮ್ಮ ಮಗುವಿಗೆ ಹಾಲುಣಿಸುತ್ತಾ, ಇತ್ತೀಚಿನ ವರ್ಷಗಳಲ್ಲಿ ಭಾರತದ ಅತ್ಯಂತ ವ್ಯಾಪಕವಾದ ಮಿಲಿಟರಿ ಕಾರ್ಯಾಚರಣೆಯಾದ ಭಯೋತ್ಪಾದನಾ ವಿರೋಧಿ ದಾಳಿಗೆ ಇಟ್ಟ ಹೆಸರನ್ನೇ ಮಗುವಿಗೂ ಇಟ್ಟಿರುವುದಕ್ಕಾಗಿ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡಾ ಮಗುವಿಗೆ ಇಟ್ಟ ಹೆಸರನ್ನು ಶ್ಲಾಘಿಸಿದ್ದಾರೆ.
ಆಪರೇಷನ್ ಸಿಂಧೂರ್ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಹತ್ಯಾಕಾಂಡಕ್ಕೆ ನೇರ ಪ್ರತಿಕ್ರಿಯೆಯಾಗಿದೆ. ಈ ಭಯೋತ್ಪಾದನಾ ದಾಳಿಯಲ್ಲಿ 26 ನಾಗರಿಕರು, ಮುಖ್ಯವಾಗಿ ಹಿಂದೂ ಪುರುಷರೇ ಬಲಿಯಾಗಿದ್ದರು. ನಿಷೇಧಿತ ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನ ಒಂದು ಭಾಗವಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು.