Published
11 hours agoon
By
Akkare Newsಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಡೆಗೋಡೆ, ಕಿಂಡಿಅಣೆಕಟ್ಟು ಮತ್ತು ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಕೊಳವೆ ಬಾವಿ ಮಂಜೂರಾತಿಗೆ ಆಗ್ರಹಿಸಿ ಕರ್ನಾಟಕ ಸರಕಾರದ ಸಣ್ಣ ನೀರಾವರಿ ಖಾತೆ ಸಚಿವರಾದ ಬೋಸರಾಜು ಅವರಿಗೆ ಪುತ್ತೂರು ಶಾಸಕ ಅಶೋಕ್ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಶುಕ್ರವಾರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಡೆಗೋಡೆ ಬೇಡಿಕೆ ಹೆಚ್ಚಿನ ಸಂಖ್ಯೆಯಲ್ಲಿದ್ದು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಅನುದಾನವನ್ನು ನೀಡುವಂತೆ ಸಚಿವರಲ್ಲಿ ಮನವಿ ಸಲ್ಲಿಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ಹೊಳೆ, ದೊಡ್ಡ ಹೊಳೆಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವುದು ಮತ್ತು ಬೇಸಿಗೆಯಲ್ಲಿ ನೀರು ಸಂಗ್ರಹಣೆಗೆ ಉಪಯುಕ್ತವಾಗುವ ರೀತಿಯಲ್ಲಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದಲ್ಲಿ ಕೃಷಿ ಚಟುವಟಿಕೆಗೆ ಪ್ರಯೋಜನವಾಗಲಿದೆ.
‘
ಈಗಾಗಲೇ ಕರಾವಳಿ ಭಾಗದಲ್ಲಿ ವಿಪರೀತ ಉಷ್ಣಾಂಶ ಇರುವ ಕಾರಣ ಬೇಸಿಗೆಯ ಕೊನೇ ತಿಂಗಳಲ್ಲಿ ಹೊಳೆಗಳು , ನದಿಗಳು ಬತ್ತಿ ಹೋಗುತ್ತಿದೆ. ನೀರು ಸಂಗ್ರಹಣೆ ವ್ಯವಸ್ಥೆ ಮಾಡದೇ ಇದ್ದಲ್ಲಿ ಕೃಷಿಗೆ ತೊಂದರೆಯಾಗಲಿದ್ದು ಈ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿ ಕಿಂಡಿಅಣೆಕಟ್ಟಿಗೆ ಅನುದಾನ ಮಂಜೂರು ಮಾಡುವಂತೆ ಸಚಿವರಲ್ಲಿ ಶಾಸಕರು ಮನವಿ ಮಾಡಿದ್ದಾರೆ. ಕ್ಷೇತ್ರದ ಎಸ್ ಸಿ ಮತ್ತು ಎಸ್ ಟಿ ಸಮುದಾಯದಿಂದ ಕೊಳವೆ ಬಾವಿಗಳ ಬೇಡಿಕೆ ಇದ್ದು ಈ ಹಿಂದೆ ಸರಕಾರ ಹಲವು ಕೃಷಿ ದಲಿತ ಕುಟುಂಬಳಿಗೆ ಕೊಳವೆ ಬಾವಿಯನ್ನು ಮಂಜೂರು ಮಾಡಿದ್ದರೂ ಇನ್ನೂ ಬೇಡಿಕೆ ಇರುವ ಕಾರಣ ಇಲಾಖೆಯಿಂದ ಕೊಳವೆ ಬಾವಿ ಮಂಜೂರು ಮಾಡಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಬೇಡಿಕೆಗಳ ಪಟ್ಟಿಯ ಪ್ರಸ್ತಾವನೆಯನ್ನು ಸಚಿವರಿಗೆ ನೀಡಲಾಗಿದೆ.