Connect with us

ಇತರ

ಪ್ರಜಾಸೌಧ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್‌ “ಕ್ರೆಡಿಟ್‌’ ವಾರ್‌!

Published

on

ಈ ಸಂಕೀರ್ಣಕ್ಕೆ ರಾಜ್ಯ ಸರಕಾರದ ಜತೆಗೆ ಕೇಂದ್ರ ಸರಕಾರವೂ ಅನುದಾನ ನೀಡಿದೆ: ಶಾಸಕ ವೇದವ್ಯಾಸ ಕಾಮತ್‌

ಮಂಗಳೂರು: ನೂತನ ಪ್ರಜಾಸೌಧ ನಿರ್ಮಾಣವಾಗಿದೆ. ಆದರೆ ಇದರ ಕ್ರೆಡಿಟ್‌ ಯಾರದ್ದು ಎಂಬ ವಿಷಯವೇ ಪ್ರಜಾಸೌಧ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಮಧ್ಯೆ ಕ್ರೆಡಿಟ್‌ ವಾರ್‌ಗೆ ವೇದಿಕೆಯಾಯಿತು.



ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, “ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಶಿಲಾನ್ಯಾಸ ಆಗಿದ್ದ ಈ ಡಿಸಿ ಕಚೇರಿ ಸಂಕೀರ್ಣವನ್ನು ಇದೀಗ ಅವರೇ ಉದ್ಘಾಟಿಸಿದ್ದಾರೆ. ಆರಂಭದಲ್ಲಿ ವೇಗದಿಂದ ನಡೆದ ಕಾಮಗಾರಿ ಬಳಿಕ ಸ್ಥಗಿತಗೊಂಡು ಈ ಜಾಗ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ನಗರ ಕಾಡು ಎಂಬಂತಾಗಿತ್ತು. ನಮ್ಮ ಸರಕಾರ ಬಂದ ಮೇಲೆ ಸಿಎಂ ಅವರಿಗೆ ನಾನು ಹಾಗೂ ದಿನೇಶ್‌ ಗುಂಡೂರಾವ್‌ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದೆವು. ಅದರಂತೆ ಸಿಕ್ಕ ಆನುದಾನದಲ್ಲಿ ಕೇವಲ 2 ವರ್ಷದಲ್ಲಿ ಕಟ್ಟಡ ಪೂರ್ಣಗೊಳಿಸಿ ಜನರಿಗೆ ಅರ್ಪಿಸಿದ್ದೇವೆ’ ಎಂದು ಅಂದು-ಇಂದಿನ ಚಿತ್ರಣದ ಪೊಟೊವನ್ನು ಪ್ರದರ್ಶಿಸಿದರು.



ಬಳಿಕ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್‌ ಮಾತನಾಡಿ, “ಪ್ರಜಾಸೌಧ ಕಟ್ಟಡ ಉದ್ಘಾಟನೆಯಾಗುತ್ತಿರುವುದು ನಿಜಕ್ಕೂ ಶುಭ ಸುದ್ದಿ. ಆದರೆ ಈ ಸಂಕೀರ್ಣದಲ್ಲಿ ಪ್ರಧಾನಿ ಅವರ ಕನಸಿನ ಯೋಜನೆಯಾದ ಸ್ಮಾರ್ಟ್‌ಸಿಟಿ ಅನುದಾನವೂ ಇದೆ. ರಾಜ್ಯ ಸರಕಾರದ ಜತೆಗೆ ಕೇಂದ್ರವೂ ಅನುದಾನ ದೊರಕಿಸಿದೆ. ಒಂದು ವೇಳೆ ಪ್ರಧಾನಿ ಕನಸಿನ ಸ್ಮಾರ್ಟ್‌ಸಿಟಿ ಅನುದಾನ ದೊರೆಯದಿದ್ದರೆ ಈ ಯೋಜನೆ ಆಗುತ್ತಿರಲಿಲ್ಲವೋ? ಎಂದರು.

 

ಪೂರ್ಣಗೊಳಿಸಲು ನಾವೇ ಬರಬೇಕಾಯಿತು: ಸಿದ್ದರಾಮಯ್ಯ 
ಇದಕ್ಕೆ ಉತ್ತರಿಸಿದ ಸಿಎಂ, ‘ನಾನು ಮೊದಲ ಬಾರಿ ಸಿಎಂ ಆಗಿದ್ದಾಗ ಈ ಕಚೇರಿಗೆ ಶಿಲಾನ್ಯಾಸ ನಡೆಸಿ ಮೊದಲ ಹಂತದ ಹಣ ಬಿಡುಗಡೆ ಮಾಡಿದ್ದೆ. ಆದರೆ ಬಿಜೆಪಿ ಸರಕಾರದ ಸಂದರ್ಭ ಕಾಮಗಾರಿ ನಡೆಯಲಿಲ್ಲ. ಈಗ ಪೂರ್ಣಗೊಳಿಸಲು ನಾವೇ ಬರಬೇಕಾಯಿತು’ ಎಂದು ಹೇಳಿ ವೇದಿಕೆಯಲ್ಲಿದ್ದ ಶಾಸಕ ಕಾಮತ್‌ ಅವರನ್ನು ಉಲ್ಲೇಖೀಸಿ “ನಾಲ್ಕು ವರ್ಷ ನೀವೇ ಇದ್ರಲ್ಲ. ಸ್ಮಾರ್ಟ್‌ಸಿಟಿ ಅನುದಾನ ಬಳಸಬೇಕಿತ್ತು. ನಿಮ್ಮ ಅವಧಿಯಲ್ಲಿ ಯಾಕೆ ಉದ್ಘಾಟನೆ ಆಗಲಿಲ್ಲ. ಸ್ಮಾರ್ಟ್‌ಸಿಟಿ ಹಣವನ್ನು ಆಗ ಯಾಕೆ ಖರ್ಚು ಮಾಡಿಲ್ಲ?’ ಎಂದು ಪ್ರಶ್ನಿಸಿದರು. “ಇತಿಹಾಸ ಯಾವತ್ತೂ ತಿರುಚಬಾರದು. ರಾಜಕೀಯ ಮಾಡೋಣ. ಆದರೆ, ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಬೇಡ. ಚುನಾವಣೆ ಸಂದರ್ಭ ರಾಜಕೀಯ ಮಾಡಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ’ ಎಂದರು.

ಬಳಿಕ ತೆರಿಗೆ ವಿಷಯ ಪ್ರಸ್ತಾವಿಸಿದ ಸಿಎಂ, “ರಾಜ್ಯದಿಂದ ನಾವು ನಾಲ್ಕೂವರೆ ಲಕ್ಷ ಕೋ.ರೂ ತೆರಿಗೆ ಕೇಂದ್ರಕ್ಕೆ ಕೊಡುತ್ತೇವೆ. ಆದರೆ ರಾಜ್ಯಕ್ಕೆ ವಾಪಾಸ್‌ ಸಿಗುವುದು ಕೇವಲ 65 ಸಾವಿರ ಕೋ.ರೂ. ಮಾತ್ರ. ಅಂದರೆ ಶೇ.14ರಷ್ಟು. ಕಾಮತ್‌ ಅವರು ಕೇಂದ್ರದ ವಿಷಯ ಹೇಳದೇ ಇರುತ್ತಿದ್ದರೆ ನಾನಿದನ್ನು ಹೇಳುತ್ತಿರಲಿಲ್ಲ’ ಎಂದು ನಕ್ಕರು.

 

Continue Reading
Click to comment

Leave a Reply

Your email address will not be published. Required fields are marked *

Advertisement