Published
14 hours agoon
By
Akkare Newsಉಪ್ಪಿನಂಗಡಿ:ತಾಯಿಯ ಹುಟ್ಟಿನಿಂದ, ಒಡನಾಡಿಗಳಿಂದ ಹಾಗೂ ಸಮುದಾಯದೊಂದಿಗೆ ಸಂತೋಷ, ದುಃಖ, ನೋವನ್ನು ವ್ಯಕ್ತಪಡಿಸಲು ಮಾತೃಭಾಷೆಯು ಮುಖ್ಯವಾಗಿದೆ. ಪ್ರತಿಯೊಂದು ಮಗುವಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವುದು ಮುಖ್ಯ. ಆಗ ಮಗು ಜ್ಞಾನವನ್ನು ಬೇಗ ಪಡೆದುಕೊಳ್ಳುತ್ತದೆ ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮಂಜುನಾಥ ಬಿ.ಆರ್ ಹೇಳಿದರು. ಇವರು ಇತ್ತೀಚೆಗೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಹತ್ತನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಮಾತೃಭಾಷಾ ಶಿಕ್ಷಣದ ಮಹತ್ವ” ಎಂಬ ವಿಷಯದ ಕುರಿತು ಮಾತನಾಡಿದರು. ಅಷ್ಟೇ ಅಲ್ಲದೆ ಮಗುವಿನ ತೊದಲು ನುಡಿಯು ಮಾತೃಭಾಷೆ ಆಗಿರುತ್ತದೆ.
.
ಸವಿಯಾದ ಹಾಡು, ಸವಿಯಾದ ದೇಶ ಕಟ್ಟುವುದು ಮಾತೃಭಾಷೆಯ ಮೂಲಕ ಸಾಧ್ಯ. ಪೂರ್ವಜರು ಪರಂಪರೆಯಿಂದ ಮಾಡಿಕೊಂಡು ಬಂದ ಸಂಪ್ರದಾಯವಿದು. ಮನಸ್ಸು, ಒಳ ಮನಸ್ಸಿನ ಮಾತು, ನಾವು ಎಷ್ಟೇ ವಿದ್ವತ್ತು ಬಹು ಭಾಷೆಯನ್ನು ಕಲಿತರು ನಮ್ಮ ಅಂತರಂಗದ ಮಾತಿಗೆ ಮಾತೃಭಾಷೆಯು ಹತ್ತಿರವಾಗಿದೆ. ನಮ್ಮದಲ್ಲದ ಭಾಷೆಯಲ್ಲಿ ಶಿಕ್ಷಣ ನೀಡಿದರೆ ತಲೆಗೆ ಹೋಗುತ್ತದೆ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಹೃದಯಕ್ಕೆ ತಲುಪುತ್ತದೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದರು.
ಪ್ರಯೋಗಶೀಲಕ್ಕೆ ಬಂದಾಗ ಮಾತ್ರ ಮಾತೃಭಾಷೆ ಉಳಿಯುತ್ತದೆ ಮತ್ತು ಮಾತೃಭಾಷೆಯು ಶಿಕ್ಷಣದ ಮಾಧ್ಯಮವಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಶ್ರೀ ಕೇಶವ್ ಕುಮಾರ್ ಬಿ ಇವರುಗಳು ಉಪಸ್ಥಿತರಿದ್ದರು.