ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕ್ರೀಡೆ

ಪ್ರೊ ಕಬಡ್ಡಿ ಲೀಗ್ : ಪಾಟ್ನಾ ಪೈರೇಟ್ಸ್ ನ್ನು ಮಣಿಸಿ ʼಪ್ರೊ ಕಬಡ್ಡಿ ಲೀಗ್ ಸೀಸನ್ 11ʼ ಗೆದ್ದ ಹರ್ಯಾಣ ಸ್ಟೀಲರ್ಸ್

Published

on

ಮುಂಬೈ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು ನೂತನ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಪಾಟ್ನಾ ಪೈರೇಟ್ಸ್​​ ವಿರುದ್ಧದ ರೋಚಕ ಫೈನಲ್​​ನಲ್ಲಿ ಗೆದ್ದ ಹರಿಯಾಣ ಪಿಕೆಎಲ್‌ ಇತಿಹಾಸದಲ್ಲೇ ಚೊಚ್ಚಲ ಟ್ರೋಫಿ ಎತ್ತಿಹಿಡಿದಿದೆ. ಡಿಸೆಂಬರ್​ 29ರ ಭಾನುವಾರ ರಾತ್ರಿ ಪುಣೆಯ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಈ ಹಣಾಹಣಿಯಲ್ಲಿ 32-23 ಅಂಕಗಳಿಂದ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಬಾರಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಸ್ಟೀಲರ್ಸ್, ಪ್ರಶಸ್ತಿ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಪಾಟ್ನಾ ಪೈರೇಟ್ಸ್ 4ನೇ ಟ್ರೋಫಿ ಕನಸು ಭಗ್ನಗೊಂಡಿದೆ.

ಪಂದ್ಯದಲ್ಲಿ ಟಾಸ್ ಜಯಿಸಿದ ಪಾಟ್ನಾ, ಎದುರಾಳಿ ತಂಡಕ್ಕೆ ರೈಡ್​ಗೆ ಅವಕಾಶ ನೀಡಿತು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಹರಿಯಾಣ ಯಾವುದೇ ಹಂತದಲ್ಲೂ ಪಾಟ್ನಾಗೆ ಲೀಡ್ ಬಿಟ್ಟುಕೊಡಲಿಲ್ಲ. ಪಾಟ್ನಾ ಪರ ಆಯಾನ್ ಎರಡು ಅಂಕ ಪಡೆದು 7-7 ಸಮಬಲ ಸಾಧಿಸಲು ನೆರವಾದರೂ ಮೊದಲಾರ್ಧ ಮುಕ್ತಾಯಕ್ಕೆ 15-12 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಈ ವೇಳೆ ಹರಿಯಾಣ 7 ರೈಡ್ ಪಾಯಿಂಟ್ಸ್, ಪಾಟ್ನಾ 5 ರೈಡ್ ಪಾಯಿಂಟ್ಸ್ ಪಡೆಯಿತು. ಅಲ್ಲದೆ, ಹರಿಯಾಣ 8 ಟ್ಯಾಕಲ್, ಪಾಟ್ನಾ 6 ಟ್ಯಾಕಲ್ ಅಂಕ ಪಡೆಯಿತು. ಫಸ್ಟ್​ ಹಾಫ್ ಬಳಿಕವೂ ಹರಿಯಾಣ ಆರ್ಭಟ ಮುಂದುವರೆಯಿತು. ಪಾಟ್ನಾ ಪ್ರಬಲ ಪೈಪೋಟಿ ನೀಡಲು ಯತ್ನಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಿಲ್ಲ.

 

ದ್ವಿತೀಯಾರ್ಧದಲ್ಲಿ ಇನ್ನೂ 12 ನಿಮಿಷಗಳು ಇರುವಾಗ ಭರ್ಜರಿ ಮುನ್ನಡೆ ಸಾಧಿಸಿದ ಹರಿಯಾಣ, ಮತ್ತೆ ಹಿಂದಿರುಗಿ ನೋಡಲಿಲ್ಲ. ಪಂದ್ಯದ 28 ನಿಮಿಷಗಳಲ್ಲಿ ಸ್ಕೋರ್​ ಪಾಟ್ನಾ 18 ಮತ್ತು ಸ್ಟೀಲರ್ಸ್ 27 ಅಂಕ ಪಡೆದಿತ್ತು. ಹರಿಯಾಣ ಅಂತಿಮ ಕ್ಷಣದವರೆಗೂ ಮುನ್ನಡೆ ಕಾಯ್ದುಕೊಂಡು 32-23 ಅಂಕಗಳಿಂದ ಗೆದ್ದು ಬೀಗಿತು. ಹರಿಯಾಣ ಪರ ಶಿವಂ ಪರಾತೆ 9 ಅಂಕ, ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆ 7 ಅಂಕ, ವಿನಯ್ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಾಟ್ನಾ ಪರ ಗುರುದೀಪ್ 6, ದೇವಾಂಕ್ 5 ಅಂಕ ಪಡೆದು ಹೋರಾಟ ನಡೆಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement