Published
18 hours agoon
By
Akkare Newsಪುತ್ತೂರು: ನಗರದ ಮೋಹಕ್ಕೆ ಹಳ್ಳಿಗಾಡಿನ ಸರಕಾರಿ ಶಾಲಾ ಕಾಲೇಜುಗಳು ದಿನದಿಂದ ದಿನಕ್ಕೆ ಬಳಲುತ್ತಿವೆ. ಅಂತಹುದೇ ಸಮಸ್ಯೆಯನ್ನು ಹೊತ್ತಿರುವ ಸರಕಾರಿ ಪದವಿ ಕಾಲೇಜೊಂದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇರಿಸಿದೆ. ಇದಕ್ಕಾಗಿ ಆಯ್ದುಕೊಂಡ ದಾರಿ ಒಂದೆಡೆ ಉಚಿತ ಶಿಕ್ಷಣ, ಇನ್ನೊಂದೆಡೆ ಉಚಿತ ಭೋಜನ..!
ನಗರದಿಂದ ಐದು ಕಿ.ಮೀ. ದೂರದ ಜಿಡೆಕಲ್ಲಿನ ಗುಡ್ಡದ ಮೇಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಷರ ದಾಸೋಹದ ಜತೆಗೆ ಉಚಿತ ಅನ್ನ ದಾಸೋಹ ಆರಂಭಿಸಿದೆ. ಇದು ಮಧ್ಯಾಹ್ನದ ಹಸಿವು ನೀಗಿಸುವ ಉದ್ದೇಶ ಮಾತ್ರ ಹೊಂದಿಲ್ಲ, ಬದಲಾಗಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವ ದಾಖಲಾತಿಯ ಸಂಖ್ಯೆಯು ಹೆಚ್ಚಾಗಬೇಕು ಅನ್ನುವುದೇ ಇದರ ಮೂಲ ಚಿಂತನೆ. ಅನ್ನದ ದಾರಿಯ ಮೂಲಕ ಅಕ್ಷರ ದೇಗುಲವನ್ನು ಉಳಿಸುವ ಉಪಾನ್ಯಾಸಕ ವೃಂದದ ಪ್ರಯತ್ನಕ್ಕೆ ಹಲವು ದಾನಿಗಳು ಕೈ ಜೋಡಿಸಿದ್ದಾರೆ.
ಉಚಿತ ಭೋಜನ
ನಗರದ ಹೊರವಲಯದ ಹಳ್ಳಿ ಭಾಗದಲ್ಲಿ ಇರುವ ಈ ಕಾಲೇಜಿಗೆ ಬಸ್ ಸೌಕರ್ಯ, ಊಟ, ಉಪಹಾರ ವ್ಯವಸ್ಥೆ ಅಷ್ಟಕಷ್ಟೇ. ಗುಡ್ಡದಿಂದ ಇಳಿದು ರಸ್ತೆಗೆ ಬಂದು ಅಟೋ ಹಿಡಿದು ಪೇಟೆಗೆ ಬರುವ ಸ್ಥಿತಿ. ಹೀಗಾಗಿ ವಿದ್ಯಾರ್ಥಿಗಳು ಪಟ್ಟಣದ ಕಾಲೇಜಿನ ಕಡೆಗೆ ಮುಖ ಮಾಡುತ್ತಾರೆ. ಇದನ್ನು ಮನಗಂಡ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಅವರು ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತ ಭೋಜನ ವ್ಯವಸ್ಥೆ ಮಾಡಬೇಕು ಯೋಚಿಸಿದ್ದರು. ಅದಕ್ಕಾಗಿ ಹಲವರನ್ನು ಸಂಪರ್ಕಿಸಿದ್ದರು.
ಅಕ್ಕಿ, ಪಾತ್ರೆ, ಗ್ಯಾಸ್ ಸ್ಟವ್ ಹೀಗೆ ಎಲ್ಲವೂ ದಾನಿಗಳ ಮೂಲಕ ಲಭ್ಯವಾಯಿತು. ಅಡುಗೆಗೆ ಸಿಬಂದಿ ನೇಮಕ ಮಾಡುವ ಬದಲು ವಿದ್ಯಾರ್ಥಿಗಳು, ಉಪಾನ್ಯಾಸಕರೇ ಅಡುಗೆ ಜವಾಬ್ದಾರಿ ವಹಿಸಿಕೊಂಡರು. ಕಾಲೇಜು ಆರಂಭದ ಅವಧಿಗಿಂತ ತುಸು ಬೇಗ ಬಂದು ಅಡುಗೆ ಕೆಲಸ ಮುಗಿಸಿ ತರಗತಿಗೆ ಹಾಜರಾಗುತ್ತಾರೆ. ಇಲ್ಲಿ ಊಟಕ್ಕೆ ಯಾವುದೇ ಶುಲ್ಕ ಇಲ್ಲ. ಎಲ್ಲವೂ ಉಚಿತ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಆಗ ಅಡುಗೆ ವ್ಯವಸ್ಥೆ ಕೂಡ ವಿಸ್ತಾರವಾಗಬೇಕು. ಆ ಸಂದರ್ಭದಲ್ಲಿ ಇದಕ್ಕೆ ಬೇಕಾದ ವ್ಯವಸ್ಥೆ ಬಗ್ಗೆ ಯೋಚನೆ ಮಾಡಲು ನಿರ್ಧರಿಸಲಾಗಿದೆ.
ನಗರದಲ್ಲಿರುವಾಗ 500; ಗ್ರಾಮಾಂತರಕ್ಕೆ 40!
2007ರಲ್ಲಿ ಪುತ್ತೂರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಯಿತು. ಇದು ನಗರದ ಮೊದಲ ಸರಕಾರಿ ಪದವಿ ಕಾಲೇಜು. ಪ್ರಾರಂಭದಲ್ಲಿ ನಗರದ ಕೇಂದ್ರದಲ್ಲಿರುವ ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದಲ್ಲಿ ಪ್ರಾರಂಭಗೊಂಡು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿತ್ತು. 2009 ರಲ್ಲಿ ನಗರದಿಂದ ಐದು ಕಿ.ಮೀ. ದೂರದಲ್ಲಿ ಇರುವ ಜಿಡೆಕಲ್ಲಿಗೆ ಸ್ಥಳಾಂತರಗೊಂಡು ಸ್ವಂತ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಗೊಂಡಿತ್ತು. ನೆಲ್ಲಿಕಟ್ಟೆಯಲ್ಲಿ ಇರುವಾಗ 480ರಿಂದ 500 ತನಕ ವಿದ್ಯಾರ್ಥಿ ಸಂಖ್ಯೆ ಹೊಂದಿದ್ದ ಈ ಕಾಲೇಜು ಐದು ಕಿ.ಮೀ. ದೂರಕ್ಕೆ ಬಂದಾಗ ಆ ಸಂಖ್ಯೆ 40ಕ್ಕೆ ಇಳಿದಿದೆ.
ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಕೇವಲ 40 ವಿದ್ಯಾರ್ಥಿಗಳನ್ನಷ್ಟೇ ಹೊಂದಿದೆ. ಬಿಎ, ಬಿಕಾಂ, ಬಿಸಿಎ ವಿಭಾಗ ಇಲ್ಲಿದೆ. ಆದರೆ ಬಿಸಿಎ ವಿಭಾಗಕ್ಕೆ ವಿದ್ಯಾರ್ಥಿಗಳೇ ಇಲ್ಲದ ಕಾರಣ ಅದಿನ್ನೂ ತೆರದಿಲ್ಲ. ಬಿಎ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ. ತೃತೀಯ ವರ್ಷದಲ್ಲಿ ಮಾತ್ರ ವಿದ್ಯಾರ್ಥಿಗಳು ಇದ್ದಾರೆ. ಬಿಕಾಂನಲ್ಲಿ ಪ್ರಥಮ ಮತ್ತು ತೃತೀಯ ವರ್ಷ ತರಗತಿಯಲ್ಲಿ ವಿದ್ಯಾರ್ಥಿಗಳಿದ್ದರೆ ದ್ವಿತೀಯ ಬಿಕಾಂನಲ್ಲಿ ವಿದ್ಯಾರ್ಥಿ ಸಂಖ್ಯೆ ಶೂನ್ಯ.
100 ಮಂದಿಗೆ ಉಚಿತ ಶಿಕ್ಷಣ: ಘೋಷಣೆ
ವಿದ್ಯಾರ್ಥಿ ಸಂಖ್ಯೆ ಹೆಚ್ಚಳಕ್ಕೆ ಈ ಕಾಲೇಜು 100 ಮಂದಿಗೆ ಉಚಿತ ಶಿಕ್ಷಣ ನೀಡುವ ಘೋಷಣೆ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷ ದಿಂದ ಈ ಉಚಿತ ಶಿಕ್ಷಣ ಜಾರಿಯಾಗಲಿದೆ. ವಿದ್ಯಾರ್ಥಿಗಳಿಗೆ ವರ್ಷಕ್ಕೆ ಅಂದಾಜು 5000 ರೂ. ವೆಚ್ಚವಾಗಲಿದ್ದು, ಇದನ್ನು ರೋಟರಿ ಸಂಸ್ಥೆಗಳು, ಶಿಕ್ಷಣಾಕಾಂಕ್ಷಿಗಳ ಮೂಲಕ ಭರಿಸಲು ನಿರ್ಧರಿಸಲಾಗಿದೆ. ಹಾಲಿ ಸ್ಥಗಿತಗೊಂಡಿರುವ ಬಿ.ಸಿ.ಎ. ವಿಭಾಗವನ್ನು ಮರು ಆರಂಭಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಸುಮಾರು 15 ಮಂದಿ ವಿದ್ಯಾರ್ಥಿಗಳು ಕಾಲೇಜನ್ನು ಸಂಪರ್ಕಿಸಿದ್ದಾರೆ.
ವಿದ್ಯಾರ್ಥಿ, ಉಪನ್ಯಾಸಕರೇ ಬಾಣಸಿಗರು
ಉಚಿತ ಶಿಕ್ಷಣದ ಜತೆಗೆ ಮಧ್ಯಾಹ್ನ ಉಚಿತ ಭೋಜನ ನೀಡುವ ಪ್ರಯತ್ನ ಆರಂಭಿಸಿದ್ದೇವೆ. ಮುಂದಿನ ಶೈಕ್ಷಣಿಕ ತರಗತಿಗಳು ಆಗಸ್ಟ್‌ನಲ್ಲಿ ಪ್ರಾರಂಭಗೊಳ್ಳಲಿದ್ದು 100 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಇನ್ನು ದಾನಿಗಳ ಸಹಕಾರದಿಂದ ಮಧ್ಯಾಹ್ನ ಉಚಿತ ಭೋಜನದ ವ್ಯವಸ್ಥೆ ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿ ಅಡುಗೆ ತಯಾರಿಸುತ್ತೇವೆ.
*ಸುಬ್ಬಪ್ಪ ಕೈಕಂಬ
ಪ್ರಾಂಶುಪಾಲರು, ಜಿಡೆಕಲ್ಲು ಕಾಲೇಜು