Published
8 months agoon
By
Akkare News
ಮಂಜೇಶ್ವರ/ಕುಂದಾಪುರ: ಮನೆಯಲ್ಲಿ ನಿದ್ರಿಸುತ್ತಿದ್ದ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅವರನ್ನು ಕೊಲೆಗೈದುದಲ್ಲದೆ ನೆರೆಮನೆಯ ಮಹಿಳೆಯನ್ನು ತನ್ನ ಮನೆಗೆ ಕರೆಸಿ ಅವರ ಕೊಲೆಗೂ ಯತ್ನಿಸಿದ ಘಟನೆ ಮಂಜೇಶ್ವರ ಠಾಣೆ ವ್ಯಾಪ್ತಿಯ ವರ್ಕಾಡಿಯಲ್ಲಿ ನಡೆದಿದೆ.


ವರ್ಕಾಡಿ ನಲ್ಲಂಗಿ ನಿವಾಸಿ ದಿ| ಲೂಯಿಸ್ ಮೊಂತೇರೊ ಅವರ ಪತ್ನಿ ಹಿಲ್ಡಾ ಮೊಂತೆರೋ (60) ಮೃತಪಟ್ಟಿರುವ ಮಹಿಳೆ. ಅವರ ಪುತ್ರ ಮೆಲ್ವಿನ್ ಮೊಂತೆರೊ (33) ಕೊಲೆ ಆರೋಪಿ. ನೆರೆಮನೆಯಲ್ಲಿರುವ ತನ್ನ ಸಂಬಂಧಿಕರಾದ ವಿಕ್ಟರ್ ಅವರ ಪತ್ನಿ ಲೋಲಿಟ (30) ಹತ್ಯೆ ಯತ್ನದಿಂದ ಗಂಭೀರವಾಗಿ ಸುಟ್ಟ ಗಾಯಗೊಂಡಿರುವ ಮಹಿಳೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಡರಾತ್ರಿ ತಾಯಿಗೆ ಬೆಂಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಹೇಳಿ ಮನೆಗೆ ಕರೆದ ಬಳಿಕ ಆಕೆಗೂ ಬೆಂಕಿ ಹಚ್ಚಿದ್ದಾನೆ. ಬಳಿಕ ತಾಯಿಯ ಮೃತ ದೇಹವನ್ನು ಮನೆಯ ಹಿಂಭಾಗದ ಪೊದೆಗೆ ಎಸೆದಿದ್ದನು.ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರವೇ ವಾಸಿಸುತ್ತಿದ್ದು, ಇನ್ನೋರ್ವ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿದ್ದಾರೆ. ಆರೋಪಿ ಮೆಲ್ವಿನ್ ಕಟ್ಟಡ ಕಾರ್ಮಿಕನಾಗಿದ್ದು, ಕೃತ್ಯಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಮಂಜೇಶ್ವರ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.


ಕೊಲೆ ಆರೋಪಿ ಮೆಲ್ವಿನ್‌ನನ್ನು ಬೈಂದೂರು ಹಾಗೂ ಕೊಲ್ಲೂರು ಠಾಣೆ ಪೊಲೀಸರ ತಂಡ ಶುಕ್ರವಾರ ಕಾಲ್ತೊಡಿನ ಬ್ಯಾಟ್ಯಾಯಾನಿ ಎಂಬಲ್ಲಿ ಬಂಧಿಸಿದೆ.
ಶುಕ್ರವಾರ ಬೆಳಗ್ಗಿನ ಜಾವ 4ರಿಂದ 5 ಗಂಟೆಯ ನಡುವೆ ತಾಯಿಯನ್ನು ಕೊಲೆಗೈದಿರುವ ಮೆಲ್ವಿನ್ ಬಳಿಕ ಪರಾರಿಯಾಗಿದ್ದು, ಮಂಗಳೂರು, ಉಡುಪಿಯ ಮೂಲಕ ಕುಂದಾಪುರದತ್ತ ಬಂದಿದ್ದ. ಆತನ ಮೊಬೈಲ್ ನೆಟವರ್ಕ್ ಮೇಲೆ ಕಣ್ಣಿಟ್ಟಿದ್ದ ಮಂಚೇಶ್ವರ ಪೊಲೀಸರಿಗೆ ಆತ ಕೊಲ್ಲೂರಿನತ್ತ ತೆರಳುತ್ತಿರುವ ಮಾಹಿತಿ ಲಭಿಸಿತು. ತತ್‌ಕ್ಷಣ ಕೊಲ್ಲೂರಿನ ಪೊಲೀಸರಿಗೆ ಮಾಹಿತಿ ನೀಡಿದರು.
ಕೊಲ್ಲೂರು ಠಾಣೆಯ ಎಸ್‌ಐ ವಿನಯ್ ಕೊರ್ಲಹಳ್ಳಿ ನೇತೃತ್ವದ ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆಗಿಳಿದರು. ಆರೋಪಿಯು ಕುಂದಾಪುರದಿಂದ ಕೊಲ್ಲೂರಿಗೆ ಬಸ್‌ನಲ್ಲಿ ಹೊರಟಿದ್ದನು. ಆದರೆ ಕೊಲ್ಲೂರಿಗೆ ತೆರಳದೇ, ಹಾಲ್ಕಲ್ ಜಂಕ್ಷನ್‌ನಲ್ಲಿ ಇಳಿದು ಅಲ್ಲಿಂದ ರಿಕ್ಷಾದಲ್ಲಿ ಎಲ್ಲೂರು ಮೂಲಕ ಕಾಲ್ತೊಡಿಗೆ ತೆರಳಿದ್ದನು.
ಆ ವೇಳೆಗೆ ಮಂಜೇಶ್ವರ ಪೊಲೀಸರ ತಂಡವೂ ಆಗಮಿಸಿತ್ತು. ಸ್ಥಳೀಯರ ಮಾಹಿತಿಯಂತೆ ಕೊಲ್ಲೂರು ಪೊಲೀಸರು ಹಾಗೂ ಬೈಂದೂರು ಎಸ್‌ಐ ತಿಮ್ಮೇಶ್ ಬಿ.ಎನ್. ನೇತೃತ್ವದ ಪೊಲೀಸರು ಜಂಟಿಯಾಗಿ ಆರೋಪಿ ಅಡಗಿದ್ದ ಕಾಲ್ತೊಡಿನ ಬ್ಯಾಟ್ಯಾಯಾನಿ ಎಂಬಲ್ಲಿಗೆ ತೆರಳಿ ಮಧ್ಯಾಹ್ನ 12ರಿಂದ 1 ಗಂಟೆಯ ಮಧ್ಯದ ಅವಧಿಯಲ್ಲಿ ಸೆರೆ ಹಿಡಿದರು. ಇಲ್ಲಿನ ಪೊಲೀಸರು ಆತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಂಜೇಶ್ವರ ಠಾಣೆ ಸಿ.ಐ ಇ.ಅನೂಪ್ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





