Published
14 hours agoon
By
Akkare News
ಅಹ್ಮದಾಬಾದ್: ಗುಜರಾತ್ – ಆರ್ಸಿಬಿ ನಡುವಿನ ರೋಚಕ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಹೈವೋಲ್ಟೇಜ್ ಫಿನಾಲೆಯಲ್ಲಿ ಟಾಸ್ ಗೆದ್ದು ಬೆಂಗಳೂರು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಆರಂಭಿಕ ಓವರ್ನಲ್ಲಿ ಪಾಟಿದಾರ್ ಪಡೆಗೆ ಈ ನಿರ್ಧಾರ ಕೈ ಹಿಡಿಯಿತು.

ಆಶದಾಯಕ ಜೋಡಿಗಳಾದ ಗಿಲ್ – ಸುದರ್ಶನ್ ಪವರ ಪ್ಲೇನಲ್ಲೇ ಔಟಾದರು. ಇಬ್ಬರು ಕೂಡ ಶಾರ್ಟ್ ಬೌಲ್ಗೆ ವಿಕೆಟ್ ಒಪ್ಪಿಸಿದರು.
ಸಾಯಿ ಸುದರ್ಶನ್ 12 ರನ್ಗಳಿಸಿ ಭುವನೇಶ್ವರ್ ಕುಮಾರ್ ಅವರ ಎಸೆತದಲ್ಲಿ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ಕೊಟ್ಟರು. ಶುಭಮನ್ ಗಿಲ್ 10 ರನ್ ಗಳಿಸಿ ಹ್ಯಾಜಲ್ವುಡ್ ಎಸೆತಕ್ಕೆ ಪಾಟಿದಾರ್ ಅವರಿಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.

ಆ ಬಳಿಕ ಬ್ಯಾಟಿಂಗ್ ಆರ್ಡರ್ನಲ್ಲಿ ಬೇಗನೇ ಬಂದ ನಿಶಾಂತ್ ಸಿಂಧು ಬಟ್ಲರ್ ಅವರೊಂದಿಗೆ ಜತೆಯಾಟ ನೀಡಿದರು. ಅಪಾಯ ಸ್ಥಿತಿಯಲ್ಲಿದ್ದ ತಂಡವನ್ನು ದಡ ಸೇರಿಸಿದರು. ಪವರ್ ಪ್ಲೇನಲ್ಲಿ ಗುಜರಾತ್ ತಂಡ 45 ರನ್ 2 ಪ್ರಮುಖ ವಿಕೆಟ್ ಕಳೆದುಕೊಂಡಿತು.
ಆದರೆ ರಸಿಖ್ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಹೋಗುವ ಭರದಲ್ಲಿ ನಿಶಾಂತ್ ಸಿಂಧು 20 ರನ್ ಗಳಿಸಿ ಪಡಿಕ್ಕಲ್ ಅವರಿಗೆ ಕ್ಯಾಚ್ ಕೊಟ್ಟು ಔಟಾದರು. ಭರವಸೆ ಮೂಡಿಸಿದ್ದ ಜಾಸ್ ಬಟ್ಲರ್ ಕೃನಾಲ್ ಅವರ ಮ್ಯಾಜಿಕ್ ಬೌಲ್ಗೆ ಸ್ಟೆಪ್ ಔಟಾದರು. 19 ರನ್ಗಳಿಸಿ ಬಟ್ಲರ್ ಬೇಗನೇ ಪೆವಿಲಿಯನ್ ಸೇರಿದರು.
ನಂತರದಲ್ಲಿ ಆಲ್ರೌಂಡರ್ಸ್ಗಳಾದ ಅರ್ಷಾದ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ಜತೆಯಾಟ ನೀಡಿ ಸ್ಕೋರ್ ಬೋರ್ಡ್ ಚೇತರಿಕೆಗೆ ನೆರವಾದರು. ಆದರೆ ಅರ್ಷಾದ್ ಖಾನ್ (15 ರನ್) ಅವರಿಗೆ ಹ್ಯಾಜಲ್ವುಡ್ ಶಾರ್ಟ್ ಬೌಲಿಂಗ್ನಲ್ಲಿ ಔಟ್ ಮಾಡಿದರು. ಕಳೆದ ಎರಡು ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದ ರಾಹುಲ್ ತೆವಾಟಿಯಾ ಈ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ಔಟಾದರು. ಜೇಸನ್ ಹೋಲ್ಡಾರ್ ಭುವನೇಶ್ವರ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ವಾಷಿಂಗ್ಟನ್ ಸುಂದರ್ ಗುಜರಾತ್ ಪರವಾಗಿ ಅತ್ಯಧಿಕ ರನ್ (50 ರನ್) ಗಳಿಸಿ ಕೊನೆಯರೆಗೂ ಮೈದಾನದಲ್ಲಿದ್ದರು. ಗುಜರಾತ್ 20 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು.
ಆರ್ ಸಿಬಿ ರಸಿಖ್ 3 ವಿಕೆಟ್, ಹ್ಯಾಜಲ್ವುಡ್, ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಪಡೆದರು ಮಿಂಚಿದರು. ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು.
156ರ ರನ್ ಚೇಸ್ ಮಾಡಲು ಇಳಿದ ಆರ್ಸಿಬಿಗೆ ವಿರಾಟ್ – ವೆಂಕಟೇಶ್ ಉತ್ತಮ ಅಡಿಪಾಯ ಹಾಕಿಕೊಂಡರು. ವೆಂಕಟೇಶ್ ಅಯ್ಯರ್ ಕಾಲು ನೋವಿನ ನಡುವೆಯೂ ಸ್ಫೋಟಕವಾಗಿ ಆಟವನ್ನಾಡಿದರು. ರಬಾಡ ಅವ ಒಂದೇ ಓವರ್ನಲ್ಲಿ ಕೊಹ್ಲಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿದರು. ಆ ಓವರಿನಲ್ಲಿ ಒಟ್ಟು 19 ರನ್ ಬಂತು.

ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ವೆಂಕಟೇಶ್ ಅಯ್ಯರ್ ಬಿರುಸಿನ 32 ರನ್ ಗಳಿಸಿ, ಸಿರಾಜ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಪಡಿಕ್ಕಲ್ ಮಹತ್ವ ಪಂದ್ಯದಲ್ಲಿ ಕೈ ಕೊಟ್ಟರು. ಕೇವಲ 1 ರನ್ ರನ್ ಗಳಿಸಿ ರಬಾಡ ಅವರಿಗೆ ವಿಕೆಟ್ ಒಪ್ಪಿಸಿದರು.
ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಆರ್ಸಿಬಿಗೆ ರಶೀದ್ ಖಾನ್ ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದು ಶಾಕ್ ನೀಡಿದರು. ರಜತ್ ಪಾಟಿದಾರ್ ದೊಡ್ಡ ಹೊಡೆತಕ್ಕೆ ಹೋಗುವ ಭರದಲ್ಲಿ 15 ರನ್ ಗಳಿಸಿ ಕ್ಯಾಚ್ ಕೊಟ್ಟು ಔಟಾದರು. ಅದೇ ಓವರ್ನಲ್ಲಿ ಬಂದ ಕೃನಾಲ್ ಪಾಂಡ್ಯ ಎಲ್ಬಿಗೆ ಔಟಾದರು. ಒಂದು ಕಡೆ ವಿಕೆಟ್ ಹೋಗುತ್ತಿದ್ರೂ, ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು. ಕೊಹ್ಲಿ 25 ಎಸೆತದಲ್ಲಿ 50 ರನ್ ಪೂರ್ತಿ ಮಾಡಿದರು. ಆ ಮೂಲಕ ಒತ್ತಡದ ಪರಿಸ್ಥಿತಿಯಲ್ಲಿದ್ದ ತಂಡವನ್ನು ಮತ್ತೊಮ್ಮ ಪಾರು ಮಾಡಿದರು.
ಟಿಮ್ ಡೇವಿಡ್ 24 ರನ್ ಗಳಿಸಿ ಔಟಾದರು. ಆದರೆ ಇನ್ನೊಂದು ಕಡೆ ಕೊಹ್ಲಿ ಸುಲಭವಾಗಿಯೇ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು.


