Connect with us

ರಾಜಕೀಯ

ರಾಜ್ಯದಲ್ಲಿ ಅರ್ಹ ವ್ಯಕ್ತಿಗಳಿಗೆ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ವಿತರಿಸಿರುವ ಸಂಬಂಧ ಕಂದಾಯ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಪ್ರಕಟ

Published

on

ರಾಜ್ಯದಲ್ಲಿ ಅರ್ಹ ವ್ಯಕ್ತಿಗಳಿಗೆ ಕರ್ನಾಟಕ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ವಿತರಿಸಿರುವ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹಾಗೂ ನಿರ್ವಹಣಾ ಚೌಕಟ್ಟು ಪ್ರಕಟಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಯಿಂದ ಅಧಿಕೃತಗೊಳಿಸಲಾದ ಉಪ ತಹಸಿಲ್ದಾರ್‌ ಅಥವಾ ತಹಸೀಲ್ದಾರ್‌, ಇತರೆ ಯಾವುದೇ ಅಧಿಕಾರಿಯನ್ನು ಶಾಶ್ವತ ನಿವಾಸ ಪ್ರಮಾಣಪತ್ರ ಹಾಗೂ ಡೊಮಿಸೈಲ್‌ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವನ್ನಾಗಿ ನಿಯೋಜಿಸಲಾಗಿದೆ. ಸಹಾಯಕ ಆಯುಕ್ತರಿಗೆ ಮೇಲ್ಮನವಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ-ಪುನರ್‌ ಪರಿಶೀಲನಾ ಪ್ರಾಧಿಕಾರ ಆಗಿ ವ್ಯವಹರಿಸಲಿದ್ದಾರೆ. ಪ್ರಮಾಣಪತ್ರ ನೀಡುವ ಪ್ರಾಧಿಕಾರವು ಅಗತ್ಯ ವಿಚಾರಣೆ ಹಾಗೂ ಪರಿಶೀಲನೆ ನಂತರ ಅರ್ಜಿದಾರರು ಕರ್ನಾಟಕ ರಾಜ್ಯದ ನಿಜವಾದ ಮತ್ತು ಶಾಶ್ವತ ನಿವಾಸಿಯಾಗಿದ್ದಾರೆ ಎಂಬ ಬಗ್ಗೆ ಖಚಿತಪಡಿಸಿಕೊಂಡು ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಜನಿಸಿರಬೇಕು. ಅರ್ಜಿದಾರರು ಅಥವಾ ಅವರ ತಂದೆ, ತಾಯಿ ಅಥವಾ ಕಾನೂನು ಬದ್ಧ ಪಾಲಕರು ಕರ್ನಾಟಕ ರಾಜ್ಯದಲ್ಲಿ ಸತತವಾಗಿ ಕನಿಷ್ಠ ಹತ್ತು ವರ್ಷ ವಾಸವಿರಬೇಕು. ಕರ್ನಾಟಕದಲ್ಲಿನ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ ತರಗತಿ ಅಥವಾ ತತ್ಸಮಾನ ಹಂತದವರಿಗೆ ಕನಿಷ್ಠ 10 ಶೈಕ್ಷಣಿಕ ವರ್ಷಗಳ ಕಾಲ ವ್ಯಾಸಂಗ ಮಾಡಿರಬೇಕು.

ಪೋಷಕರು ಅಥವಾ ಸಂಗಾತಿಯ ವಾಸಸ್ಥಳ, ಅರ್ಜಿದಾರರ ತಂದೆ, ತಾಯಿ, ಕಾನೂನುಬದ್ಧ ಪಾಲಕರು ಅಥವಾ ಪತಿ, ಪತ್ನಿಯು ಕರ್ನಾಟಕದಲ್ಲಿ ಸಾಮಾನ್ಯ ಹಾಗೂ ಶಾಶ್ವತ ನಿವಾಸಿಯಾಗಿರಬೇಕು. ವಸತಿ ಆಸ್ತಿ-ಅರ್ಜಿದಾರರು ಅಥವಾ ಅವರ ಕುಟುಂಬವು ಕರ್ನಾಟಕದಲ್ಲಿ ವಸತಿ ಅಥವಾ ಇತರೆ ಸ್ಥಿರಾಸ್ತಿಯ ಮಾಲೀಕತ್ವ ಹೊಂದಿರಬೇಕು. ಕಾನೂನುಬದ್ಧವಾದ ವಾರಸುದಾರರಾಗಿರಬೇಕು ಅಥವಾ ಬಳಸುತ್ತಿರಬೇಕು. ಮತದಾರರ ಪಟ್ಟಿ, ಆಧಾರ್‌, ಪಡಿತರ ಚೀಟಿ, ಕಂದಾಯ ದಾಖಲೆಗಳು ಅಥವಾ ಇತರೆ ಸರ್ಕಾರಿ ದಾಖಲೆಗಳಲ್ಲಿ ಅರ್ಜಿದಾರರು ಅಥವಾ ಅವರ ಪೋಷಕರ ಹೆಸರು ಸಾಮಾನ್ಯ ನಿವಾಸಿಯಾಗಿ ದಾಖಲಾಗಿರಬೇಕು.

ಪ್ರತಿ ಗ್ರಾಪಂ ಹಾಗೂ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಯ ವಾರ್ಡ್‌ ಕಚೇರಿಯಲ್ಲಿ ಸಹಾಯ ಮತ್ತು ಸೌಲಭ್ಯ ಕೌಂಟರ್‌ ಸ್ಥಾಪಿಸಬೇಕು. ಅಟಲ್‌ ಜನಸ್ನೇಹಿ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌, ಸಿಎಸ್‌ಸಿಗಳು ಮತ್ತು ಇತರೆ ಅಧಿಕೃತ ಕೇಂದ್ರಗಳು ಅರ್ಜಿಗಳ ಪ್ರಕ್ರಿಯೆ ನಡೆಸಬೇಕು. ಆದೇಶ ಆದ ಒಂದು ವಾರದಲ್ಲಿ ಎಲ್ಲಾ ಕೌಂಟರ್‌ಗಳ ವ್ಯವಸ್ಥೆ ಆಗಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌, ಅಟಲ್‌ ಜನಸ್ನೇಹಿ ಕೆಂದ್ರ (ಎಜೆಎಸ್‌ಕೆ) ಪೋರ್ಟಲ್‌ ಅಥವಾ ಸರ್ಕಾರ ಕಾಲಕಾಲಕ್ಕೆ ಅಧಿಸೂಚಿಸುವ ಇತರೆ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು.

 

Continue Reading
Click to comment

Leave a Reply

Your email address will not be published. Required fields are marked *

Advertisement