Connect with us

ಇತರ

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

Published

on

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದೇವನ್, ತಮ್ಮ ರಾಜೀನಾಮೆಯ ನಂತರ ಟಿವಿಕೆ ಪ್ರತಿನಿಧಿಗಳು ತಮ್ಮನ್ನು ಸಂಪರ್ಕಿಸಿದ್ದು, ಪ್ರಾಥಮಿಕ ಚರ್ಚೆಗಳ ನಂತರ ಈ ಆಹ್ವಾನವನ್ನು ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಚೆನ್ನೈನಲ್ಲಿ ಸೆಪ್ಟೆಂಬರ್ 10ರಂದು ನಟ ವಿಜಯ್ ಅವರನ್ನು ಭೇಟಿಯಾದ ನಂತರ ಪಕ್ಷ ಸೇರ್ಪಡೆಯ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಟಿವಿಕೆ ಪಕ್ಷವು ತಮಗೆ ಕೇರಳ ಘಟಕದ ಅಧ್ಯಕ್ಷ ಸ್ಥಾನವನ್ನು ಆಫರ್ ಮಾಡಿದೆ ಎಂದು ದೇವನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾನು 2004ರಲ್ಲಿ ಎತ್ತಿದ್ದ ಕೆಲವು ವಿಷಯಗಳನ್ನೇ ವಿಜಯ್ ಕೂಡ ಈಗ ಎತ್ತುತ್ತಿದ್ದಾರೆ. ರಾಜಕೀಯದಲ್ಲಿ ನಮ್ಮಿಬ್ಬರ ನಡುವೆ ಕೆಲವು ಸಮಾನ ಆಲೋಚನೆಗಳಿದ್ದು, ಇದುವೇ ನನ್ನನ್ನು ಅವರತ್ತ ಆಕರ್ಷಿಸಿತು ಎಂದು ದೇವನ್ ಹೇಳಿದ್ದಾರೆ. ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಹೋರಾಡುವ ಹಾಗೂ ಹೊಸ ರಾಜಕೀಯ ಸಂಸ್ಕೃತಿಯನ್ನು ಹುಟ್ಟುಹಾಕುವ ಉದ್ದೇಶದಿಂದ ತಾವು ರಾಜಕೀಯಕ್ಕೆ ಬಂದಿದ್ದಾಗಿ ಅವರು ತಿಳಿಸಿದ್ದಾರೆ.2004ರಲ್ಲಿ ತಾವು ದಕ್ಷಿಣ ಭಾರತದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಖಳನಟನಾಗಿದ್ದಾಗ, ರಾಜಕೀಯ ಪ್ರವೇಶದಿಂದ ಸಿನಿಮಾ ವೃತ್ತಿಜೀವನಕ್ಕೆ ಧಕ್ಕೆಯಾಗುತ್ತದೆ ಎಂದು ಗೊತ್ತಿದ್ದರೂ, ರಾಜಕೀಯಕ್ಕೆ ಬಂದಿದ್ದಾಗಿ ದೇವನ್ ನೆನಪಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಮೂಲಕ ತಮ್ಮ ರಾಜಕೀಯ ರಂಗಪ್ರವೇಶ ಮಾಡಿದ್ದ ಅವರು, 2004ರಲ್ಲಿ ‘ಕೇರಳ ಪೀಪಲ್ಸ್ ಪಾರ್ಟಿ’ ಸ್ಥಾಪಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದರು. 2004ರ ವಡಕ್ಕಂಚೇರಿ ಉಪಚುನಾವಣೆ ಮತ್ತು 2006ರ ತಿರುವನಂತಪುರಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 2020ರಲ್ಲಿ ತಮ್ಮ ಪಕ್ಷವನ್ನು ‘ನವ ಕೇರಳ ಪೀಪಲ್ಸ್ ಪಾರ್ಟಿ’ ಎಂದು ಮರುನಾಮಕರಣ ಮಾಡಿ ಮರುಚಾಲನೆ ನೀಡಿದ್ದರು. 2021ರಲ್ಲಿ ಈ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಾಯಿತು ಮತ್ತು ದೇವನ್ ಅವರಿಗೆ ಕೇರಳ ಬಿಜೆಪಿ ಘಟಕದ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಬಿಜೆಪಿಯಲ್ಲಿ ಸುಮಾರು 5 ವರ್ಷಗಳ ಕಾಲ ಇದ್ದರೂ ತಮಗೆ ಸೂಕ್ತ ‘ಅವಕಾಶ’ ಮತ್ತು ಕೆಲಸ ಮಾಡಲು ಸೂಕ್ತ ವಾತಾವರಣ ಸಿಗಲಿಲ್ಲ ಎಂದು ಆರೋಪಿಸಿ ಅವರು ಆಗಸ್ಟ್ 15ರಂದು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಬಿಜೆಪಿ ಘಟಕವು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಸಾಮಾಜಿಕ ನ್ಯಾಯದ ಆದರ್ಶಗಳಿಂದ ದೂರ ಸರಿಯುತ್ತಿದೆ ಎಂದೂ ಅವರು ಆರೋಪಿಸಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement