Connect with us

ಇತರ

ಮಂಗಳೂರು ಪಶ್ಚಿಮ ವಲಯ ನೂತನ ಐಜಿಪಿಯಾಗಿ ಎನ್. ಶಶಿಕುಮಾರ್ ಅಧಿಕಾರ ಸ್ವೀಕಾರ

Published

on

ಮಂಗಳೂರು: ರಾಜ್ಯ ಸರ್ಕಾರದ ಆದೇಶದನ್ವಯ ಮಂಗಳೂರು ಪಶ್ಚಿಮ ವಲಯದ ನೂತನ ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರು ಗುರುವಾರ ಬೆಳಿಗ್ಗೆ ಸುಧೀರ್ ಕುಮಾರ್ ರೆಡ್ಡಿ ಅವರಿಂದ ಅಧಿಕಾರ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ 2011–13ರ ಅವಧಿಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ 2021 – 23ರ ಅವಧಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವ ತಮಗಿದೆ ಎಂದು ಶಶಿಕುಮಾರ್ ಸ್ಮರಿಸಿದರು. “ಈ ವಲಯದಲ್ಲಿ ಕರಾವಳಿ ಪ್ರದೇಶ, ಅಂತರರಾಜ್ಯ ಗಡಿ, ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳಿವೆ. ಇಲ್ಲಿ ಪ್ರವಾಸೋದ್ಯಮ ಮತ್ತು ಶಿಕ್ಷಣ ಸಂಸ್ಥೆಗಳು ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಹೊರರಾಜ್ಯ ಹಾಗೂ ಹೊರದೇಶಗಳಿಂದಲೂ ವಿದ್ಯಾರ್ಥಿಗಳು, ಪ್ರವಾಸಿಗರು ಬರುತ್ತಿದ್ದಾರೆ. ವಾಯು, ರೈಲು ಮತ್ತು ರಸ್ತೆ ಸಂಪರ್ಕ ಹೆಚ್ಚಿರುವುದರಿಂದ ಜನರ ಓಡಾಟವೂ ಅಧಿಕವಾಗಿದ್ದು, ಈ ಹಿಂದಿನ ನಾಲ್ಕು ವರ್ಷಗಳ ಸೇವಾ ಅನುಭವವು ಈಗಿನ ಜವಾಬ್ದಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗಲಿದೆ” ಎಂದರು. ನಾಲ್ಕು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ – ಪ್ರಮುಖ ಆದ್ಯತೆಗಳು: ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನಾಲ್ಕು ಜಿಲ್ಲೆಗಳ ಘಟಕಾಧಿಕಾರಿಗಳೊಂದಿಗೆ (SP) ಸಭೆ ನಡೆಸಿರುವುದಾಗಿ ತಿಳಿಸಿದ ಅವರು, ನಾಲ್ಕು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಶಾಂತಿಯುತ ವಾತಾವರಣ ನಿರ್ಮಿಸುವುದು. ಅಪರಾಧ ಪ್ರಕರಣಗಳ ತಡೆಗಟ್ಟುವಿಕೆ, ಶೀಘ್ರ ಪತ್ತೆ ಹಾಗೂ ಪ್ರಮುಖ ನಗರಗಳಲ್ಲಿರುವ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹುರಿದುಂಬಿಸಿ, ಜನಸ್ನೇಹಿ ಆಡಳಿತ ನೀಡುವುದು, ಈ ಅಂಶಗಳಿಗೆ ಒತ್ತು ನೀಡುವುದಾಗಿ ಹೇಳಿದರು.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಗೂ ತ್ವರಿತ ಸ್ಪಂದನೆ: “ನನ್ನ ವ್ಯಾಪ್ತಿಗೆ ಮಂಗಳೂರು ನಗರ (ಕಮಿಷನರೇಟ್) ಬರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ಸೇರಿದಂತೆ ಉಳಿದ ಮೂರು ಜಿಲ್ಲೆಗಳಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕರ ನೆಮ್ಮದಿ ಮತ್ತು ಶಾಂತಿಗೆ ಭಂಗ ತರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಪ್ರತಿಕ್ರಿಯಾ ಸಮಯ ಬಹಳ ಮುಖ್ಯವಾಗಿದ್ದು, ಯಾವುದೇ ಘಟನೆ ಅಥವಾ ಅಪಘಾತ ಸಂಭವಿಸಿದಾಗ ತಕ್ಷಣವೇ ಸ್ಪಂದಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಮಾನವ – ವನ್ಯಜೀವಿ ಸಂಘರ್ಷ ಹಾಗೂ ನಕ್ಸಲ್ ಚಟುವಟಿಕೆ ಕುರಿತು ಪ್ರತಿಕ್ರಿಯೆ: ಚಿಕ್ಕಮಗಳೂರಿನಲ್ಲಿ ಕಾಡಾನೆ ತುಳಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕುರಿತು ಪ್ರತಿಕ್ರಿಯಿಸಿದ ಐಜಿಪಿ, “ಈ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಉತ್ತರ ಕನ್ನಡ ಸೇರಿದಂತೆ ಈ ವಲಯದಲ್ಲಿ ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಮಾನವ – ವನ್ಯಜೀವಿ ಸಂಘರ್ಷ ತಡೆಯಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳಿಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ” ಎಂದರು.

ನಕ್ಸಲ್ ಸಮಸ್ಯೆ ಮತ್ತು ಎಎನ್‌ಎಫ್: “ಈ ಹಿಂದೆ ನಾನು ಚಿಕ್ಕಮಗಳೂರು ಎಸ್‌ಪಿ ಹಾಗೂ ಮಂಗಳೂರು ಕಮಿಷನರ್ ಆಗಿದ್ದಾಗ ನಕ್ಸಲ್ ಚಟುವಟಿಕೆಗಳಿದ್ದವು. ಇದೀಗ ನಕ್ಸಲ್ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಹಲವು ಎಎನ್‌ಎಫ್ (ANF) ಕ್ಯಾಂಪ್‌ಗಳನ್ನು ಬೇರೆ ಪಡೆಗಳಾಗಿ ಪರಿವರ್ತಿಸಿ ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿಯಿದೆ. ಯಾವುದೇ ಸಮಸ್ಯೆ ಎದುರಾದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಭಾಯಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement