Connect with us

ಇತರ

ಈಜು ಕ್ರೀಡೆಯಲ್ಲಿ 182 ಪದಕಗಳ ಸಾಧನೆ – ಲಿಖಿತ್ ರಾಮಚಂದ್ರಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Published

on

ಪುತ್ತೂರು: ಈಜು ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪುತ್ತೂರಿನ ಪ್ರತಿಭಾನ್ವಿತ ಕ್ರೀಡಾಪಟು ಲಿಖಿತ್ ರಾಮಚಂದ್ರ ಅವರು 2026ನೇ ಸಾಲಿನ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆದ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 15 ವರ್ಷದ ಲಿಖಿತ್, ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಈಜು ತರಬೇತಿಯನ್ನು ಆರಂಭಿಸಿ, ಕಳೆದ ಹನ್ನೊಂದು ವರ್ಷಗಳಿಂದ ಸತತ ಅಭ್ಯಾಸ ಹಾಗೂ ಪರಿಶ್ರಮದ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.ಪುತ್ತೂರಿನ ಶಿವರಾಮ ಕಾರಂತ ಬಾಲವನದಲ್ಲಿರುವ ಈಜುಕೊಳದಲ್ಲಿ ಈಜು ತರಬೇತಿ ಪಡೆದಿರುವ ಲಿಖಿತ್, ಇದುವರೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 182 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ನಾಲ್ಕು ಪ್ರಮುಖ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದಿರುವುದು ಅವರ ಕ್ರೀಡಾ ಪ್ರತಿಭೆಗೆ ಸಾಕ್ಷಿಯಾಗಿದೆ. ಇವರ ಸಾಧನೆಗಳಲ್ಲಿ 13ನೇ ವಯಸ್ಸಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಲೈಫ್ ಸೇವಿಂಗ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ನಲ್ಲಿ ರಾಜ್ಯ ಚಾಂಪಿಯನ್ ಆಗಿರುವುದು ವಿಶೇಷವಾಗಿದೆ. ಅತಿ ಕಿರಿಯ ವಯಸ್ಸಿನಲ್ಲಿಯೇ ನಿರಂತರ ಸಾಧನೆಯ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವ ಲಿಖಿತ್ ಅವರ ಪರಿಶ್ರಮ, ಶಿಸ್ತು ಹಾಗೂ ಕ್ರೀಡಾ ಬದ್ಧತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಇವರು ಪುತ್ತೂರು ಮೆಸ್ಕಾಂನಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ರಾಮಚಂದ್ರ ಎ. ಹಾಗೂ ದೀಪಾರಾಣಿ ದಂಪತಿಯ ಪುತ್ರ.

ಚಿಕ್ಕ ವಯಸ್ಸಿನಿಂದಲೇ ಈಜು ಕ್ರೀಡೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು, ಅನೇಕ ಸವಾಲುಗಳನ್ನು ಎದುರಿಸಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಲಿಖಿತ್ ಅವರಿಗೆ ದೊರೆತಿರುವ ಈ ಜಿಲ್ಲಾ ಮಟ್ಟದ ಗೌರವವು ಪುತ್ತೂರು ತಾಲ್ಲೂಕು ಮಾತ್ರವಲ್ಲದೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂಬುದು ಕ್ರೀಡಾಭಿಮಾನಿಗಳು, ಪೋಷಕರು ಹಾಗೂ ಹಿತೈಷಿಗಳ ಆಶಯವಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement