Connect with us

ಇತರ

ಶಾಲೆಗೆ ಲಕ್ಷ ಲಕ್ಷ ಫೀಸ್ ಕಟ್ಟಿದರೂ ಮತ್ತೆ ಟ್ಯೂಷನ್‌‌ಗೆ ಯಾಕೆ ಹಣ ಕೊಡಬೇಕು? ಶುರುವಾಯ್ತು ಹೊಸ ಚರ್ಚೆ

Published

on

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಪೋಷಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನ ಸೇರಿಸಲು ಪೋಷಕರು ಲಕ್ಷಾಂತರ ರೂಪಾಯಿಗಳನ್ನ ಖರ್ಜು ಮಾಡುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ, ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ನಂತಹ ವಿಷಯಗಳನ್ನ ಕಲಿಯಲು ಗಂಟೆಗಟ್ಟಲೆ ಸಮಯ ಕಳೆಯುವ ಮಕ್ಕಳು, ಶಾಲೆಯ ನಂತರ ಅದೇ ವಿಷಯಗಳನ್ನ ಕಲಿಯಲು ಮತ್ತೆ ಖಾಸಗಿ ಟ್ಯೂಷನ್ ಮೊರೆ ಹೋಗುತ್ತಿದ್ದಾರೆ. ಈ ‘ಡಬಲ್ ಪೇಮೆಂಟ್’ ಅಂದರೆ ಒಂದೇ ವಿಷಯಕ್ಕೆ ಎರಡು ಬಾರಿ ಹಣ ಪಾವತಿಸುವ ಪದ್ಧತಿ ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಶಾಲಾ ಶುಲ್ಕ ಮತ್ತು ಟ್ಯೂಷನ್: ಡಾ. ಸನ್ನಿ ಗರ್ಗ್ ಎತ್ತಿದ ಪ್ರಮುಖ ಪ್ರಶ್ನೆ

ಶಿಕ್ಷಣ ಕ್ಷೇತ್ರದ ಉದ್ಯಮಿ ಹಾಗೂ ತಜ್ಞರಾದ ಡಾ. ಸನ್ನಿ ಗರ್ಗ್ ಅವರು ಇತ್ತೀಚೆಗೆ ಇದೇ ವಿಚಾರವಾಗಿ ಒಂದು ಮಹತ್ವದ ಪ್ರಶ್ನೆಯನ್ನು ಎತ್ತಿದ್ದಾರೆ. “ನಾವು ಒಂದೇ ಶಿಕ್ಷಣಕ್ಕಾಗಿ, ಅದೇ ಕೋರ್ ವಿಷಯಗಳಿಗಾಗಿ ಎರಡು ಬಾರಿ ಹಣ ಪಾವತಿಸುವುದನ್ನು ಏಕೆ ಸಹಜವೆಂದು ಒಪ್ಪಿಕೊಂಡಿದ್ದೇವೆ?” ಎಂದು ಅವರು ಪ್ರಶ್ನಿಸಿದ್ದಾರೆ. ಸಿಇಒ ರಿವ್ಯೂ ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಶಿಕ್ಷಣ ವ್ಯವಸ್ಥೆಯ ಲೋಪಗಳನ್ನ ಎತ್ತಿ ತೋರಿಸಿದೆ. ಪೋಷಕರು ದುಬಾರಿ ಶಾಲಾ ಶುಲ್ಕ ಪಾವತಿಸಿದರೂ, ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಬೆಂಬಲಕ್ಕಾಗಿ ಪ್ರತ್ಯೇಕ ಕೋಚಿಂಗ್ ಅಥವಾ ಟ್ಯೂಷನ್ ತರಗತಿಗಳನ್ನ ಅವಲಂಬಿಸುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ.

 

ಭಾರತೀಯ ಶಿಕ್ಷಣ ವ್ಯವಸ್ಥೆ: ತರಗತಿಯ ಕಲಿಕೆ ಸಾಲುತ್ತಿಲ್ಲವೇ? ಖಾಸಗಿ ಟ್ಯೂಷನ್ ಇಂದು ಭಾರತೀಯ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡಿದರೂ, ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ವೈಯಕ್ತಿಕ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆ ಉಂಟುಮಾಡುತ್ತಿದೆ.

ಪರಿಣಾಮವಾಗಿ, ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಮತ್ತು ಪೈಪೋಟಿಯನ್ನ ಎದುರಿಸಲು ಶಾಲೆಯ ನಂತರದ ಟ್ಯೂಷನ್‌ಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಇದು ಕೇವಲ ಹೆಚ್ಚುವರಿ ಅಭ್ಯಾಸಕ್ಕೆ ನೆರವಾದರೆ, ಇನ್ನು ಕೆಲವರಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳ ಓಟದಲ್ಲಿ ಮುಂದೆ ಹೋಗಲು ಅನಿವಾರ್ಯವಾಗಿದೆ.

ಪೋಷಕರಿಗೆ ಅನಗತ್ಯ ಆರ್ಥಿಕ ಹೊರೆ ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ಇದು ಕೇವಲ ಶೈಕ್ಷಣಿಕ ಅನಿವಾರ್ಯತೆ ಮಾತ್ರವಾಗಿ ಉಳಿದಿಲ್ಲ. ಪಕ್ಕದ ಮನೆಯವರು ಅಥವಾ ಸ್ನೇಹಿತರ ಮಕ್ಕಳು ಟ್ಯೂಷನ್‌ಗೆ ಹೋಗುತ್ತಿದ್ದಾರೆ ಎಂಬ ಕಾರಣಕ್ಕಾಗಿ, ತಮ್ಮ ಮಕ್ಕಳೂ ಅಲ್ಲಿಗೆ ಹೋಗದಿದ್ದರೆ ಎಲ್ಲಿ ಓದುವುದರಲ್ಲಿ ಹಿಂದುಳಿಯುತ್ತಾರೋ ಎಂಬ ಆತಂಕ ಪೋಷಕರಲ್ಲಿ ಮನೆಮಾಡಿದೆ. ಇದು ಪೋಷಕರ ಮೇಲೆ ಆರ್ಥಿಕ ಹೊರೆ ಮತ್ತು ಮಾನಸಿಕ ಒತ್ತಡವನ್ನ ಹೇರುತ್ತಿದೆ. ಬೆಳಗಿನಿಂದ ಸಂಜೆಯವರೆಗೆ ಶಾಲೆಯಲ್ಲಿ ಕಳೆಯುವ ಮಕ್ಕಳು, ಮತ್ತೆ ಸಂಜೆ ಟ್ಯೂಷನ್‌ಗೆ ಹೋಗುವುದರಿಂದ ಅವರ ಆಟಪಾಠಗಳಿಗೆ, ದೈಹಿಕ ಬೆಳವಣಿಗೆಗೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಸಮಯವೇ ಸಿಗುತ್ತಿಲ್ಲ. ಈ ಟ್ಯೂಷನ್ ಸಂಸ್ಕೃತಿ ಮಕ್ಕಳ ಮುಗ್ಧ ಬಾಲ್ಯವನ್ನ ಕಸಿದುಕೊಳ್ಳುತ್ತಿದೆ.
ವಿದ್ಯಾರ್ಥಿಗಳ ಕಲಿಕೆ: ಶಾಲೆಗಳು ಬದಲಾಗಬೇಕಾದ ಅಗತ್ಯವಿದೆ ಈ ಸಮಸ್ಯೆಯು ಕೇವಲ ಟ್ಯೂಷನ್ ಶುಲ್ಕದ ಬಗ್ಗೆ ಮಾತ್ರವಲ್ಲ, ಬದಲಾಗಿ ಶಾಲೆಯ ತರಗತಿಗಳಲ್ಲಿ ನಡೆಯುತ್ತಿರುವ ಬೋಧನೆಯ ಗುಣಮಟ್ಟದ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶಾಲಾ ವೇಳೆಯಲ್ಲೇ ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನ ನೀಡಿ, ಅವರ ಕಲಿಕೆಯಲ್ಲಿನ ಅಂತರವನ್ನ ತುಂಬಲು ಶಾಲೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ? ಒಂದು ವೇಳೆ ಶಾಲೆಗಳೇ ಅತ್ಯುತ್ತಮ ಹಾಗೂ ವೈಯಕ್ತಿಕ ಕಾಳಜಿಯುಳ್ಳ ಶಿಕ್ಷಣವನ್ನ ಒದಗಿಸಿದರೆ, ಪೋಷಕರು ಮತ್ತೆ ಖಾಸಗಿ ಟ್ಯೂಷನ್‌ಗಳಿಗೆ ಹಣ ಸುರಿಯುವ ಅಗತ್ಯವಿರುತ್ತದೆಯೇ? ಖಂಡಿತವಾಗಿಯೂ ಇಲ್ಲ. ಶಾಲಾ ಅವಧಿಯಲ್ಲೇ ಪರಿಣಾಮಕಾರಿ ಕಲಿಕೆಯನ್ನ ಹೇಗೆ ನೀಡಬಹುದು ಎಂಬುದರ ಕುರಿತು ಶಾಲೆಗಳು ಹಾಗೂ ಶಿಕ್ಷಣ ತಜ್ಞರು ಮರುಚಿಂತನೆ ನಡೆಸುವ ತುರ್ತು ಅಗತ್ಯವಿದೆ. ಶಾಲಾ ವ್ಯವಸ್ಥೆ ಸುಧಾರಿಸಿದರೆ ಮಾತ್ರ ಪೋಷಕರ ಆರ್ಥಿಕ ಹೊರೆ ಕಡಿಮೆಯಾಗಲು ಸಾಧ್ಯ.

 

Continue Reading
Click to comment

Leave a Reply

Your email address will not be published. Required fields are marked *

Advertisement