Connect with us

ಇತರ

ಬೆಳೆವಿಮೆ ಬಿಜೆಪಿ ಆರೋಪಕ್ಕೆ ತಿರಿಗೇಟು ನೀಡಿದ ಕಾಂಗ್ರೆಸ್ ರೈತರನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ : ಕೆ ಪಿ.ಸಿ.ಸಿ. ವಕ್ತಾರ ಅಮಲ ರಾಮಚಂದ್ರ

Published

on

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆಯಿದ್ದು, ರೈತರ ಹಿತಕ್ಕಿಂತ ವಿಮಾ ಕಂಪೆನಿಗಳ ಲಾಭಕ್ಕೆ ಆದ್ಯತೆ ನೀಡಲಾಗಿದೆ. 2023ರಲ್ಲಿ ಬೆಳೆ ವಿಮಾ ಯೋಜನೆಯ ಟರ್ಮ್‌ಶೀಟ್ ಬದಲಾವಣೆಯಾಗಿದೆ ಎಂಬುದು ಸತ್ಯ. ಆದರೆ ಈ ಬದಲಾವಣೆ ಕಾಂಗ್ರೆಸ್ ಸರಕಾರ ಅಧಿಕಾರ ಸ್ವೀಕರಿಸುವ ಮೊದಲೇ ನಡೆದಿದ್ದು, ಇದಕ್ಕೆ ಅಂದಿನ ಬಿಜೆಪಿ ಸರಕಾರವೇ ಹೊಣೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿಮಾ ಪರಿಹಾರ ಕಡಿಮೆಯಾಗಿರುವ ವಿಚಾರದಲ್ಲಿ ಕಾಂಗ್ರೆಸ್ ಸರಕಾರವನ್ನು ಗುರಿಯಾಗಿಸುವ ಬಿಜೆಪಿಯ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದರು.

ವಿಮಾ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯು ರೈತರನ್ನು ಕತ್ತಲಲ್ಲಿಟ್ಟು ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ವ್ಯವಸ್ಥೆಯಾಗಿದೆ ಎಂದು ಆರೋಪಿಸಿದ ಅಮಳರಾಮಚಂದ್ರ ಅವರು ರೈತರು ಪ್ರೀಮಿಯಂ ಪಾವತಿಸಿದ ಬಳಿಕ ವಿಮಾ ಮೊತ್ತ ಪಾವತಿಯಾಗಲು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ವಿಮಾ ಯೋಜನೆಯಲ್ಲಿ ಯಾವ ಸಂಸ್ಥೆ ಹೊಣೆಗಾರಿಕೆ ಹೊಂದಿದೆ, ಪರಿಹಾರ ಸರಿಯಾಗಿ ಪಾವತಿಯಾಗದಿದ್ದರೆ ಯಾರಿಗೆ ದೂರು ಸಲ್ಲಿಸಬೇಕು, ಮಳೆ ಮತ್ತು ಉಷ್ಣಾಂಶದ ಆಧಾರದಲ್ಲಿ ಎಷ್ಟು ಪರಿಹಾರ ಸಿಗಬೇಕು ಎಂಬ ವಿವರಗಳು ರೈತರಿಗೆ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ ರೂ.1,28,೦೦೦ ಹಾಗೂ ಕಾಳುಮೆಣಸಿಗೆ ರೂ.47,೦೦೦ ವಿಮಾ ಮೊತ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ವಿಮಾ ಕಂಪೆನಿಗಳಿಗೆ ಸರಕಾರಗಳು ನೀಡುವ ಪ್ರೀಮಿಯಂ ಸಹಾಯಧನದ ಪ್ರಮಾಣವನ್ನು ಪ್ರಶ್ನಿಸಿದ ಅವರು, ಸರಕಾರದ ತೆರಿಗೆ ಹಣದಿಂದ ವಿಮಾ ಕಂಪೆನಿಗಳಿಗೆ ಲಾಭವಾಗುವುದಾದರೆ, ರೈತರಿಗೆ ನೇರವಾಗಿ ಪರಿಹಾರ ನೀಡುವ ವ್ಯವಸ್ಥೆ ರೂಪಿಸಬಾರದೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಮುನ್ನವೇ ಟೆಂಡರ್ ಪ್ರಕ್ರಿಯೆ 2023ರಲ್ಲಿ ಟರ್ಮ್‌ಶೀಟ್ ಬದಲಾವಣೆಯಾಗಿದೆ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅಮಳ ರಾಮಚಂದ್ರ, ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮೇ.10ರಂದು ನಡೆದಿದ್ದು, ಫಲಿತಾಂಶ ಮೇ 13ರಂದು ಪ್ರಕಟವಾಗಿತ್ತು. ಕಾಂಗ್ರೆಸ್ ಬಹುಮತ ಪಡೆದ ಬಳಿಕ ಸಿದ್ದರಾಮಯ್ಯ ಅವರು ಮೇ.20ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದ ಟರ್ಮ್‌ಶೀಟ್ ಬದಲಾವಣೆ ಮತ್ತು ಟೆಂಡರ್ ಪ್ರಕ್ರಿಯೆ ಮೇ 19ರಂದೇ ನಡೆದಿತ್ತು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದರು ಹಾಗೂ ರಾಜ್ಯಪಾಲರಾಗಿದ್ದವರು ಥಾವರ್ ಚಂದ್ ಗೆಹ್ಲೋಟ್. ಹೀಗಿರುವಾಗ ಟರ್ಮ್‌ಶೀಟ್ ಬದಲಾವಣೆಯಿಂದ ರೈತರಿಗೆ ತೊಂದರೆಯಾಗಿದ್ದರೆ, ಅದರ ಹೊಣೆಗಾರಿಕೆಯನ್ನು ಅಂದಿನ ಬಿಜೆಪಿ ಸರಕಾರದ ಮೇಲೆ ಹೊರಿಸಬೇಕು. ಕಾಂಗ್ರೆಸ್ ಸರಕಾರದ ಮೇಲೆ ಆರೋಪ ಹೊರಿಸುವುದು ಸತ್ಯವನ್ನು ಮರೆಮಾಚುವ ಪ್ರಯತ್ನವಾಗಿದೆ ಎಂದು ದೂರಿದರು. ಈ ಕುರಿತು ತಮ್ಮ ಬಳಿ ಸ್ಪಷ್ಟ ದಾಖಲೆಗಳಿದ್ದು, ಪತ್ರಿಕಾಗೋಷ್ಠಿಯಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿಳಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ವಾಸ್ತವಾಂಶಗಳನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.

ಹಿಂದಿನ ವರ್ಷಗಳಲ್ಲಿ ಉತ್ತಮ ಪರಿಹಾರ ಸಿಕ್ಕಿತ್ತು 2016ರಲ್ಲಿ ಮರುವಿನ್ಯಾಸಗೊಳಿಸಿದ ಬೆಳೆ ವಿಮಾ ಯೋಜನೆ ಆರಂಭವಾದ ನಂತರದ ಕೆಲವು ವರ್ಷಗಳಲ್ಲಿ ರೈತರು ಪಾವತಿಸಿದ ಪ್ರೀಮಿಯಂಗಿಂತ ಹೆಚ್ಚಿನ ಮೊತ್ತದ ಪರಿಹಾರ ಪಡೆದಿದ್ದರು. ಆಗ ರೈತರಿಗೆ ಪರಿಹಾರ ದೊರೆತಾಗ ಕೇಂದ್ರ ಸರಕಾರದ ಸಾಧನೆ ಎಂದು ಬಿಂಬಿಸಿದ್ದ ಬಿಜೆಪಿಯವರು, ಈಗ ಸಮಸ್ಯೆಗೆ ರಾಜ್ಯ ಕಾಂಗ್ರೆಸ್ ಸರಕಾರವನ್ನು ಹೊಣೆ ಮಾಡುತ್ತಿರುವುದು ವಿರೋಧಾಭಾಸದ ಸಂಗತಿ ಎಂದು ಅಮಳ ರಾಮಚಂದ್ರ ಅವರು ಟೀಕಿಸಿದರು. ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಬದಲಾವಣೆಗಳು, ಟೆಂಡರ್ ಪ್ರಕ್ರಿಯೆ ಹಾಗೂ ಸರಕಾರಗಳ ಪಾತ್ರದ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಅರ್ಧಸತ್ಯಗಳನ್ನು ಮುಂದಿಟ್ಟು ರೈತರಲ್ಲಿ ಗೊಂದಲ ಸೃಷ್ಟಿಸುವ ಬದಲು ದಾಖಲೆಗಳ ಆಧಾರದಲ್ಲಿ ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement