Published
9 hours agoon
By
Akkare News
ಪುತ್ತೂರು :ಅಕ್ಟೋಬರ್ 07 : ಜೋಡಿ ಕೊಲೆ ಪ್ರಕರಣದ ನ್ಯಾಯಾಲಯ ವಿಚಾರಣೆ ವೇಳೆ ಕೋರ್ಟ್ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್, ಸಿರಿಬಾಗಿಲು ನಿವಾಸಿ ಜಯೇಶ್ (41) ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು ಆತನಿಗೆ 2 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

2008 ರಲ್ಲಿ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದ್ದ ಭೀಕರ ತಾಯಿ-ಮಗುವಿನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಜಯೇಶ್ನ ವಿಚಾರಣೆಯು 2016 ರ ಏಪ್ರಿಲ್ 5 ರಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈ ವೇಳೆ ಆರೋಪಿ ಜಯೇಶ್ ಏಕಾಏಕಿ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸ್ ಸಿಬ್ಬಂದಿ ಮಹೇಶ್, ಪುತ್ತೂರಿನ ವಕೀಲರೊಬ್ಬರು ಹಾಗೂ ಸ್ಥಳೀಯ ಸಾರ್ವಜನಿಕರು ನ್ಯಾಯಾಲಯದ ಹೊರಭಾಗದಲ್ಲಿ ಆತನನ್ನು ಬೆನ್ನಟ್ಟಿ ಹಿಡಿದು ಮತ್ತೆ ಕೋರ್ಟ್ಗೆ ಹಸ್ತಾಂತರಿಸಿದ್ದರು.ಈ ಕುರಿತು ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪುತ್ತೂರು ನಗರ ಠಾಣೆಯ ಆಗಿನ ಎಸ್ಐ ಖಾದರ್ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪ್ರಾಸಿಕ್ಯೂಶನ್ ಪರ ಸರ್ಕಾರಿ ವಕೀಲ ಮನೋಜ್ ಕುಮಾರ್ ವಾದ ಮಂಡಿಸಿದ್ದರು. 




