Connect with us

ಇತರ

ಪುತ್ತೂರು: ಕೋರ್ಟ್ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ ಆರೋಪಿ ಜಯೇಶ್‌ಗೆ 2 ವರ್ಷ ಜೈಲು ಶಿಕ್ಷೆ!

Published

on

ಪುತ್ತೂರು :ಅಕ್ಟೋಬರ್ 07 : ಜೋಡಿ ಕೊಲೆ ಪ್ರಕರಣದ ನ್ಯಾಯಾಲಯ ವಿಚಾರಣೆ ವೇಳೆ ಕೋರ್ಟ್ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್, ಸಿರಿಬಾಗಿಲು ನಿವಾಸಿ ಜಯೇಶ್ (41) ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು ಆತನಿಗೆ 2 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

2008 ರಲ್ಲಿ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದ್ದ ಭೀಕರ ತಾಯಿ-ಮಗುವಿನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಜಯೇಶ್‌ನ ವಿಚಾರಣೆಯು 2016 ರ ಏಪ್ರಿಲ್ 5 ರಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈ ವೇಳೆ ಆರೋಪಿ ಜಯೇಶ್‌ ಏಕಾಏಕಿ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸ್ ಸಿಬ್ಬಂದಿ ಮಹೇಶ್, ಪುತ್ತೂರಿನ ವಕೀಲರೊಬ್ಬರು ಹಾಗೂ ಸ್ಥಳೀಯ ಸಾರ್ವಜನಿಕರು ನ್ಯಾಯಾಲಯದ ಹೊರಭಾಗದಲ್ಲಿ ಆತನನ್ನು ಬೆನ್ನಟ್ಟಿ ಹಿಡಿದು ಮತ್ತೆ ಕೋರ್ಟ್‌ಗೆ ಹಸ್ತಾಂತರಿಸಿದ್ದರು.ಈ ಕುರಿತು ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪುತ್ತೂರು ನಗರ ಠಾಣೆಯ ಆಗಿನ ಎಸ್‌ಐ ಖಾದರ್ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪ್ರಾಸಿಕ್ಯೂಶನ್ ಪರ ಸರ್ಕಾರಿ ವಕೀಲ ಮನೋಜ್ ಕುಮಾರ್ ವಾದ ಮಂಡಿಸಿದ್ದರು.

2008 ರಲ್ಲಿ ಶಿರಾಡಿ ನಿವಾಸಿ ಜಯೇಶ್, ತನ್ನ ದೊಡ್ಡಪ್ಪನ ಮಗ ಲೋಹಿತ್ ಅವರ ಪತ್ನಿ ಸೌಮ್ಯ ಹಾಗೂ ಆಕೆಯ ಮೂರು ವರ್ಷದ ಮಗುವನ್ನು ಭೀಕರವಾಗಿ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಕೇರಳಕ್ಕೆ ಪರಾರಿಯಾಗಿದ್ದ. ಅಲ್ಲಿ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ ಆತ, 2012 ರಲ್ಲಿ ಪತ್ನಿ ಜೊತೆ ಜಗಳವಾಡಿ ತೆಂಗಿನ ಮರವೇರಿ ಕುಳಿತಿದ್ದ. ಅಲ್ಲಿನ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಶಿರಾಡಿ ಜೋಡಿ ಕೊಲೆ ಪ್ರಕರಣದ ರಹಸ್ಯ ಬಯಲಾಗಿತ್ತು.ಶಿರಾಡಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್, ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನವನೆಂದು ಹೇಳಿ ₹100 ಕೋಟಿಗೆ ಬೇಡಿಕೆಯಿಟ್ಟಿದ್ದ. ಹಣ ನೀಡದಿದ್ದರೆ ಬಾಂಬ್ ಇಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಈ ಪ್ರಕರಣದಲ್ಲೂ ನಾಗಪುರ ನ್ಯಾಯಾಲಯ ಆತನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version