Published
2 days agoon
By
Akkare News
ಕನ್ನಡ ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರ ನೇತೃತ್ವದಲ್ಲಿ ನಡೆಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ವೀರಪ್ಪ ಮೊಯ್ಲಿಯವರು ತ್ರಿಭಾಷಾ ನೀತಿಯ ಪರವಾಗಿ ಇರುವವರು, ಕನ್ನಡಿಗರ ಮೇಲಿನ ಬಲವಂತದ ಹಿಂದಿ ಕಲಿಕೆಯ ಪರವಾಗಿ ಇರುವವರು. ಇಂಥವರು ವಿಶ್ವ ಕನ್ನಡ ಸಮ್ಮೇಳನದ ವೇದಿಕೆ ಮೇಲೆ ನಿಂತು ಏನನ್ನು ಹೇಳುತ್ತಾರೆ ಎಂದು ಕೇಳಲಾಗಿದೆ.
ಉತ್ತರದ ರಾಜ್ಯಗಳ ಮಕ್ಕಳು ಎರಡೇ ಭಾಷೆ ಕಲಿಯುತ್ತ, ಮೂರನೇ ಭಾಷೆಯ ಬದಲಿಗೆ ಅವರ ಭವಿಷ್ಯಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯದ ಪಾಠಗಳನ್ನು ಕಲಿಯುತ್ತಿರುವಾಗ ಕನ್ನಡದ ಮಕ್ಕಳು ಏಕೆ ಮೂರನೇ ಭಾಷೆಯ ಹೊರೆ ಹೊರಬೇಕು? ತಲೆತಲಾಂತರಗಳಿಂದ ನಡೆಯುತ್ತಿರುವ ಈ ಅನ್ಯಾಯ ನಿಲ್ಲಿಸಿ ಎಂದರೆ ಅದು ಸರ್ಕಾರದ ಕಿವಿಗೆ ಹೋಗುತ್ತಿಲ್ಲ. ಎಂಥ ದುಸ್ಥಿತಿ ಬಂದಿದೆ ನೋಡಿ, ಸರ್ಕಾರದ ನೀತಿಗಳನ್ನು ಕನ್ನಡ ದ್ರೋಹಿಗಳೇ ನಿರ್ಧರಿಸುತ್ತಿದ್ದಾರೆ.
ಕರ್ನಾಟಕವನ್ನು ವಲಸಿಗರ ಸ್ವರ್ಗವನ್ನಾಗಿ ಮಾಡಿ ಅದನ್ನೇ ರಾಜ್ಯದ ಅಭಿವೃದ್ಧಿ ಎಂದು ನಮ್ಮ ಜನಪ್ರತಿನಿಧಿಗಳು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಮಿತಿ ಒಂದು ನೀಡಿದ ಮಾಹಿತಿ ಪ್ರಕಾರ ರಾಜ್ಯದ ಎಂಜಿನಿಯರ್ ಪದವೀಧರರ ಪೈಕಿ ಶೇ. 17ರಷ್ಟು ಮಂದಿ ಮಾತ್ರ ಉದ್ಯೋಗ ಪಡೆದಿದ್ದಾರೆ. ಉಳಿದ ಶೇ.83 ರಷ್ಟು ಮಂದಿ ಎಲ್ಲಿಗೆ ಹೋದರು? ಸರ್ಕಾರಕ್ಕೆ ಕಿಂಚಿತ್ ಕಾಳಜಿ ಇದ್ದಿದ್ದರೆ ನಮ್ಮ ಮಕ್ಕಳು ಪದವಿ ಪಡೆದೂ ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಿತ್ತು. ರಾಜ್ಯದ ಬಹುತೇಕ ಐಟಿ ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳಿಂದ ಜನರನ್ನು ತಂದು ತುಂಬಿಕೊಳ್ಳುತ್ತಿವೆ. ಕರ್ನಾಟಕ ಈಗ ಕಸದ ತೊಟ್ಟಿ ಆಗಿ ಹೋಗಿದೆ. ಹೊರಗಿನಿಂದ ಬಂದವರ ಉದ್ಧಾರಕ್ಕೆ ಸರ್ಕಾರವೇ ಟೊಂಕ ಕಟ್ಟಿ ನಿಂತ ಮೇಲೆ ಯಾರೇನು ಮಾಡಲು ಆಗುತ್ತದೆ? ಕರ್ನಾಟಕದ ಉದ್ಯಮವೂ ನಮ್ಮ ಕೈಯಲ್ಲಿ ಇಲ್ಲ, ಉದ್ಯೋಗವೂ ನಮ್ಮ ಕೈಯಲ್ಲಿ ಇಲ್ಲ. ಕನಿಷ್ಟ ಪಕ್ಷ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂದು ಖಾಸಗಿ ಸಂಸ್ಥೆಗಳಿಗೆ ಕೇಳುವ ಧೈರ್ಯವೂ ಸರ್ಕಾರಕ್ಕೆ ಇಲ್ಲ. ಇಂಥ ಸಮೀಕ್ಷೆ ನಡೆಸಲು ಕಾರ್ಮಿಕ ಇಲಾಖೆ ಮೂರು ಬಾರಿ ಪ್ರಯತ್ನ ಪಟ್ಟು ವಿಫಲವಾಗಿದೆ. ಸರ್ಕಾರ ಈ ಕಾರ್ಪರೇಟ್ ಗೂಂಡಾಗಳಿಗೆ ಬೆದರಿ ಸಮೀಕ್ಷೆಗೆ ಅನುಮತಿಯನ್ನೇ ನೀಡಲಿಲ್ಲ.
ಇಷ್ಟೆಲ್ಲಾ ಇರುವಾಗ ನೀವು ಮಾಡಲು ಹೊರಟ ವಿಶ್ವ ಕನ್ನಡ ಸಮ್ಮೇಳನಕ್ಕೆ ಏನಾದರೂ ಅರ್ಥವಿದೆಯೇ? ಕನ್ನಡಿಗರ ಬದುಕನ್ನು ಶವ ಪೆಟ್ಟಿಗೆಯಲ್ಲಿ ಇಟ್ಟು ಅದರ ಮೇಲೆ ಎಷ್ಟು ಹೂವು ಸುರಿದರೆ ಏನು ಪ್ರಯೋಜನ? ಈ ಬೂಟಾಟಿಕೆ ಬಿಟ್ಟು ಕನ್ನಡದ ಮಕ್ಕಳ ರಕ್ಷಣೆಗೆ ಕಾಯ್ದೆಗಳನ್ನು ರೂಪಿಸುವ ಶಕ್ತಿ ನಿಮಗಿಲ್ಲವೇ? ಅದ್ಯಾವುದನ್ನೂ ಮಾಡದೇ ನಡೆಸುವ ವಿಶ್ವ ಕನ್ನಡ ಸಮ್ಮೇಳನ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇನ್ನೊಂದು ರಾಜಕೀಯ ಸಮಾವೇಶವಾಗುತ್ತದೆ ಅಷ್ಟೆ ಎಂದೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ಆಕ್ರೋಶ ಹೊರ ಹಾಕಿದ್ದಾರೆ.