Published
3 hours agoon
By
Akkare News
ಈ ಕುರಿತು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಿ, ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಲಾಗುವುದು. ಬಳಿಕ ಅಂತಿಮ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಐಟಿ-ಬಿಟಿ ಸೇರಿದಂತೆ ಎಲ್ಲ ಖಾಸಗಿ ಕಂಪನಿಗಳಲ್ಲೂ ಕನ್ನಡ ಬಾವುಟ ಹಾರಿಸುವಂತೆ ಆದೇಶ ಹೊರಡಿಸುವ ಕುರಿತು ಸಿದ್ಧತೆ ನಡೆದಿದೆ. ವಿಧಾನಸೌಧದ ಮೇಲೆಯೂ ಕನ್ನಡ ಧ್ವಜ ಹಾರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಇತ್ತೀಚೆಗೆ ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಇತಿಹಾಸವನ್ನು ಸ್ಮರಿಸಿದ ಡಿಕೆ ಶಿವಕುಮಾರ್, ಕನ್ನಡ ಭಾಷೆಗೆ ಯಾವುದೇ ಗಡಿಗಳಿಲ್ಲ. ಬ್ರಿಟಿಷರ ಆಡಳಿತದ ಕಾಲದಲ್ಲಿಯೂ ಮಕ್ಕಳು ತಮ್ಮ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದ ಇತಿಹಾಸವಿದೆ. ಕನ್ನಡಕ್ಕೆ ಸುದೀರ್ಘ ಸಾಂಸ್ಕೃತಿಕ ಪರಂಪರೆಯಿದೆ ಎಂದರು.
ನಾಡದೇವತೆ ಭುವನೇಶ್ವರಿ ತಾಯಿಯನ್ನು ಕನ್ನಡವನ್ನು ಕಾಪಾಡುವ ದೇವತೆಯೆಂದು ಬಣ್ಣಿಸಿದ ಅವರು, ರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿಗೆ ಪೂಜೆ ಸಲ್ಲಿಸಿದ್ದೇವೆ. ನಮ್ಮ ಉಸಿರು, ಭಾಷೆ, ನೆಲ ಹಾಗೂ ಧ್ವಜವನ್ನು ರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ದೇಶ-ವಿದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿರುವ ಎಲ್ಲ ಕನ್ನಡಿಗರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಕನ್ನಡ ಧ್ವಜದ ವಿನ್ಯಾಸ, ಅದನ್ನು ಎಲ್ಲಿ ಹಾಗೂ ಹೇಗೆ ಹಾರಿಸಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು ಮತ್ತು ಸಾರ್ವಜನಿಕರ ಚರ್ಚೆಗೆ ಅವಕಾಶ ಕಲ್ಪಿಸಿ, ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.