Connect with us

ಇತರ

ರಾಹುಲ್ ಗಾಂಧಿ ಚಿಕನ್ ರೋಲ್ ತಿಂದರೂ ಕಷ್ಟ ಈ ಬಲಪಂಥೀಯರಿಗೆ

Published

on

ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀನು ತಿಂದು ಧರ್ಮಸ್ಥಳದ ದೇವಸ್ಥಾನ ಪ್ರವೇಶ ಮಾಡಿದ್ದರು ಎಂಬುದನ್ನು ವಿವಾದವಾಗಿ ಮಾಡಿದ್ದ ಇದೇ ಬಲಪಂಥೀಯರು, ಗೋದಿ ಮೀಡಿಯಾಗಳು, ಈಗ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ  ಚಿಕನ್ ರೋಲ್ ತಿಂದು, (ಮಂಗಳವಾರ ಪಿತೃಪಕ್ಷ ಮಾಸ) ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ, ರಾಹುಲ್ ಗಾಂಧಿ ಹಿಂದೂ ವಿರೋಧಿ ಎಂದು ಉಯಿಲಿಡುತ್ತಿವೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟ ಅಕ್ಟೋಬರ್ 6, ಮಂಗಳವಾರದಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’ (INDIA) ಒಕ್ಕೂಟದ ಪ್ರಮುಖ ನಾಯಕರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ದೆಹಲಿ ಪೊಲೀಸರು ತಡೆದರೂ, ಸುಮಾರು ಎಂಟು ಗಂಟೆಗಳ ಕಾಲ ಆಕಾಶವಾಣಿ ಭವನದಲ್ಲಿ ಧರಣಿ ನಡೆಸಿದ ರಾಹುಲ್ ಅವರನ್ನು, ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲಾಯಿತು.

ಆದರೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಈ ಗಮನಾರ್ಹ ಪ್ರತಿಭಟನಾ ಹೆಜ್ಜೆಗಳ ಬೆನ್ನಲ್ಲೇ, ಸಂಘಪಾರಿವಾರವು ‘ಆಹಾರ ಫ್ಯಾಸಿಸಮ್’ ಎಂದರೇನು ಎಂಬುದನ್ನು ದೇಶಕ್ಕೆ ಮತ್ತೊಮ್ಮೆ ನೆನಪಿಸುತ್ತಿದೆ. ಈ ಬೃಹತ್ ಪ್ರಜಾಪ್ರಭುತ್ವ ವಿರೋಧಿ ವಿವಾದವನ್ನು ಚರ್ಚಿಸುವ ಬದಲು, ಬಲಪಂಥೀಯರ ಒಂದು ವರ್ಗಕ್ಕೆ ದೇಶದ ಅತ್ಯಂತ ತುರ್ತು ವಿಷಯವಾಗಿದ್ದುದು ‘ರಾಹುಲ್ ಗಾಂಧಿ ಏನು ತಿಂದರು?’ ಎಂಬುದು.

ಇಷ್ಟು ದೊಡ್ಡ ಪ್ರಮಾಣದ ಮತ ತಿರುಚುವಿಕೆಯ ವಿರುದ್ಧದ ಪ್ರತಿಭಟನೆ ನಡೆಯುತ್ತಿದ್ದಾಗ, ಮೋದಿ ಪರವಾದ ‘ಗೋದಿ ಮೀಡಿಯಾ’ ಮತ್ತು ಸಂಘಪಾರಿವಾರದ ಸೋಶಿಯಲ್ ಮೀಡಿಯಾಗಳು ಒಟ್ಟಾಗಿ ‘ಚರ್ಚಿಸಿದ್ದು’ ರಾಹುಲ್ ಗಾಂಧಿ ಮಧ್ಯಾಹ್ನ ಸೇವಿಸಿದ ಆಹಾರದ ಬಗ್ಗೆಯಾಗಿದೆ. ಆ ಆಹಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪ್ರಚಾರಗಳು ತುಂಬಿ ತುಳುಕುತ್ತಿವೆ. ಮಂಗಳವಾರದಂದು ರಾಹುಲ್ ಗಾಂಧಿ ಚಿಕನ್ ರೋಲ್ ತಿಂದಿರುವುದು ಹಿಂದುತ್ವದ ಭಾವನೆಗೆ ಧೆಕ್ಕೆ ತಂದಿದೆ ಎಂಬುದು ಸಂಘಪಾರಿವಾರದ ಪ್ರಲಾಪ.

ರಾಹುಲ್ ಅವರ ಜೊತೆ ಪ್ರತಿಭಟನೆಯಲ್ಲಿರುವ ಕಾರ್ಯಕರ್ತರು ಸಹ ಇದೇ ಆಹಾರವನ್ನು ಸೇವಿಸುತ್ತಿರುವುದನ್ನು ಕಾಣಬಹುದು. ದೆಹಲಿಯ ಪ್ರಸಿದ್ಧ ‘ಖಾನ್ ಚಾಚಾ’ ಅಂಗಡಿಯಿಂದ ತರಿಸಿದ ಆಹಾರವನ್ನು ಆಕಾಶವಾಣಿ ಭವನದಲ್ಲಿ ಧರಣಿ ನಿರತರಾಗಿದ್ದ ರಾಹುಲ್ ಗಾಂಧಿ ಮತ್ತು ಸಹೋದ್ಯೋಗಿಗಳು ಸೇವಿಸಿದ್ದರು. ಆದರೆ ಇದು ಚಿಕನ್ ರೊಲ್ ಆಗಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಪವಿತ್ರ ಮಾಸವಾಗಿರುವ ಪಿತೃಪಕ್ಷದಲ್ಲಿ ರಾಹುಲ್ ಮಾಂಸಹಾರ ಸೇವಿಸಿದ್ದಾರೆ ಎಂದು ಎಕ್ಸ್ (ಟ್ವಿಟರ್) ನಲ್ಲಿ ಬರೆಯಲಾಗಿದೆ.
ಪ್ರದೇಶ, ಸಮುದಾಯ, ಕುಟುಂಬದ ಪದ್ಧತಿ ಅಥವಾ ವೈಯಕ್ತಿಕ ನಂಬಿಕೆಗಳನ್ನು ಮೀರಿ, ದೇಶದ ಪ್ರತಿಯೊಬ್ಬರಿಗೂ ಒಂದೇ ರೀತಿಯ ‘ಸಾರ್ವತ್ರಿಕ ಧಾರ್ಮಿಕ ಆಹಾರ ಪದ್ಧತಿ’ ಅನ್ವಯಿಸುತ್ತದೆ ಎಂಬ ಕಲ್ಪನೆಯಲ್ಲಿ ಈ ವಾದಗಳನ್ನು ಹೆಣೆಯಲಾಗಿತ್ತು. ಪ್ಯಾಕಿಂಗ್‌ನಲ್ಲಿರುವ ಕೆಂಪು ಟೇಪ್ ಮತ್ತು ರೊಲ್ ಪ್ಯಾಕೆಟ್‌ನಲ್ಲಿರುವ ಕೆಂಪು ಗುರುತು, ಅಷ್ಟೇಕೆ ಚಿಕನ್ ತುಂಡುಗಳು ಸಹ ಅದರಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ. ಗಾಂಧಿ ಕುಟುಂಬವು ಅತ್ಯಂತ ದೊಡ್ಡ ಹಿಂದೂ ದ್ರೋಹಿಯಾಗಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಲಪಂಥೀಯ ಬೆಂಬಲಿಗರು ಮೈ ಪರಚಿಕೊಳ್ಳುತ್ತಿದ್ದಾರೆ.
ಅಂದರೆ, ದೇಶದ ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ‘ಮತದಾನ’ದ ಅಕ್ರಮದ ವಿರುದ್ಧ ರಸ್ತೆಗಿಳಿದಿದ್ದರೆ, ಆನ್‌ಲೈನ್ ಬಲಪಂಥೀಯ ಶಕ್ತಿಗಳು ರಾಹುಲ್ ಗಾಂಧಿಯವರ ಮಧ್ಯಾಹ್ನದ ಊಟದ ಮೇಲೆ ತನಿಖೆ ನಡೆಸಲು ನಿರ್ಧರಿಸಿದ್ದವು. ಮತದಾರರ ಪಟ್ಟಿಯ ವಿಶೇಷ ಪರಿಶೀಲನೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಆಕಾಶವಾಣಿ ಭವನದ ಎದುರು ‘ಪ್ರಜಾಪ್ರಭುತ್ವ ಸಂರಕ್ಷಣಾ ಮಾರ್ಚ್’ ನಡೆಸುವ ಮಧ್ಯೆ ಈ ಘಟನೆ ನಡೆದಿದೆ ಎಂಬುದೂ ಮತ್ತು ರಾಷ್ಟ್ರೀಯ ಮಟ್ಟದ ಎಲ್ಲಾ ಗೋದಿ ಮಾಧ್ಯಮಗಳು ಈ ಚಿಕನ್ ರೋಲ್ ಚರ್ಚೆಯನ್ನು ಗಂಭೀರವಾಗಿ ತೆಗೆದುಕೊಂಡಿವೆ ಎಂಬುದೂ ದೇಶದ ಇಂದಿನ ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತಿದೆ.

ಮನುಷ್ಯ ತಿನ್ನುವ ಆಹಾರದಲ್ಲಿ ಪಾವಿತ್ರತೆಯನ್ನು ಹುಡುಕುವುದು ಅಥವಾ ಅದನ್ನು ಕನಿಷ್ಟ, ಅಪವಿತ್ರ ಎಂದು ಭಾವಿಸುವುದು, ಆಹಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಬಲಪಂಥದ ಪ್ರಮುಖ ಅಜೆಂಡಾಗಳಲ್ಲೊಂದು. ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ದೇವಸ್ಥಾನ ಪ್ರವೇಶ ಮಾಡಿದ್ದರು ಎಂಬುದನ್ನು ವಿವಾದವಾಗಿ ಮಾಡಿದ್ದ ಇದೇ ಗೋದಿ ಮೀಡಿಯಾಗಳು, ಈಗ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ  ಚಿಕನ್ ರೋಲ್ ತಿಂದು, (ಮಂಗಳವಾರ ಪಿತೃಪಕ್ಷ ಮಾಸ) ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ, ರಾಹುಲ್ ಹಿಂದೂ ವಿರೋಧಿ ಎಂದು ಉಯಿಲಿಡುತ್ತಿವೆ.

 
ಸರಕಾರದ ವೈಫಲ್ಯಗಳು, ಪ್ರಜಾಪ್ರಭುತ್ವದ ಮೇಲಿನ ದಾಳಿ ಅಥವಾ ಚುನಾವಣಾ ಅಕ್ರಮಗಳ ಬಗ್ಗೆ ಪ್ರಶ್ನೆ ಎದ್ದಾಗಲೆಲ್ಲಾ, ಜನರ ಗಮನವನ್ನು ಭಾವನಾತ್ಮಕ ಮತ್ತು ಧಾರ್ಮಿಕ ವಿಷಯಗಳತ್ತ ಹಾರಿಸಲು “ಆಹಾರ, ಉಡುಪು, ಧರ್ಮ”ಗಳನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಇಲ್ಲಿಯವರೆಗೆ ಒಂದೂ ಪತ್ರಿಕಾಗೋಷ್ಠಿ ಎದುರಿಸದ, ಸಂದರ್ಶನಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡಲು ಭಯಪಡುವ, ‘ಮಾವು’ (ಮಾವಿನಹಣ್ಣು) ಕುರಿತು ಗಂಟೆಗಟ್ಟಲೆ ಮಾತನಾಡುವ ಪ್ರಧಾನಿಯನ್ನು ಹೊಗಳುವ ಮಾಧ್ಯಮಗಳೇ ಈ ಚಿಕನ್ ರೊಲ್ ಅಜೆಂಡಾದ ವಾಹಕಗಳು ಎಂಬುದು ಅರ್ಥ ಮಾಡಿಕೊಳ್ಳದಷ್ಟು ದೇಶದ ಜನ ದಡ್ಡರಲ್ಲ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version