Connect with us

ಇತರ

ಬೆಂಗಳೂರು ಆಸ್ತಿ ಮಾಲೀಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ! ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕದಿದ್ದರೆ ನೋಟಿಸ್

Published

on

ಬೆಂಗಳೂರು: ಬೆಂಗಳೂರು ನಗರದಲ್ಲಿ ಆಸ್ತಿ ಹೊಂದಿರುವವರು ಯಾವುದೇ ಕಾರಣಕ್ಕೂ ತಮ್ಮ ಜಾಗವನ್ನು ಖಾಲಿ ಬಿಡಬಾರದು. ನಿವೇಶನಕ್ಕೆ ಕಾಂಪೌಂಡ್ ಹಾಕಿಕೊಳ್ಳಬೇಕು ಅಥವಾ ಮನೆ ನಿರ್ಮಿಸಬೇಕು. ನಿಯಮ ಪಾಲಿಸದಿದ್ದರೆ ನೋಟಿಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತಂತೆ ಬಿಡಿಎ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಶಿವಕುಮಾರ್ ಅವರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ ದಿನಾಂಕ 10.7.2008 ರ ಪೂರ್ವದಲ್ಲಿ ನಿರ್ಮಿಸಲಾದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಈ ಹಿಂದಿನ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಭೂ ಮಾಲಿಕರಿಗೆ ಭೂ ಗ್ಯಾರಂಟಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 50 ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ತಿ ದಾಖಲೆಗಳಿಲ್ಲದ ಭೂ ಮಾಲಿಕರಿಗೆ ಭೂ ಗ್ಯಾರಂಟಿ ಸೇರಿದಂತೆ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.‌ ಈ ಸೌಲಭ್ಯ ಕಲಂ 38(ಡಿ) ತಿದ್ದುಪಡಿ ಮೂಲಕ ಈಗಾಗಲೇ ಜಾರಿಗೆ ಬಂದಿದ್ದು, ಡಿಸೆಂಬರ್‌ 17 ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎರಡು ವರ್ಷಗಳ ಅವಧಿಯೊಳಗಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳದಿದ್ದರೆ, ಪ್ರಾಧಿಕಾರದ ಭೂಮಿಯಲ್ಲಿರುವ ಅಂತಹ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು. 2008 ಕ್ಕಿಂತ ಮುಂಚೆ ಮನೆ ಕಟ್ಟಿದವರಿಗೆ, ಸುಮಾರು 1 ಲಕ್ಷ ಮಾಲಿಕರಿಗೆ ಆಸ್ತಿ ದೊರಕಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಸರ್ಕಾರ ಅವಕಾಶ ನೀಡಿತು. 2021ರಲ್ಲಿಯೇ ದರ ನಿಗದಿ ಮಾಡಿತ್ತು. ಆದರೆ ಶುಲ್ಕ ಹೆಚ್ಚಾಯಿತೆಂದು ಕೇವಲ 600 ಜನ ಮಾತ್ರ ಅರ್ಜಿ ಹಾಕಿದ್ದರು. ಆದರೆ ನಾವು ಶುಲ್ಕ ಕಡಿಮೆ ಮಾಡಿ ಇನ್ನೊಂದು ಅವಕಾಶ ನೀಡಿದ್ದೇವೆ. ಕ್ಲೀನ್ ಬಿಡಿಎ, ಪರಿಶುದ್ಧವಾದ ಆಡಳಿತವನ್ನು ಬೆಂಗಳೂರಿಗರಿಗೆ ನೀಡುವ ಉದ್ದೇಶದಿಂದ ಸರ್ಕಾರ ಈ ಸೌಲಭ್ಯವನ್ನು ಜಾರಿಗೊಳಿಸಿದೆ ಎಂದು ಹೇಳಿದರು.
 

ನಿಗದಿತ ಅವಧಿಯ ಒಳಗಾಗಿ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ, ಈ ಸೌಲಭ್ಯವನ್ನು ಬಳಸಿಕೊಂಡು ಆಸ್ತಿಯ ಹಕ್ಕನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ” ಎಂದರು. ಮೂಲೆ ನಿವೇಶನ ಹೊರತುಪಡಿಸಿ ಕಟ್ಟಡದೊಂದಿಗಿನ ಭೂಮಿಯ ವ್ಯಾಪ್ತಿ 20×30 ರವರೆಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು, 20×30 ಕ್ಕಿಂತ ಹೆಚ್ಚು ಮತ್ತು 30×40 ರವರೆಗೆ ಶೇ.12.5% ರಷ್ಟು, 30×40 ಕ್ಕಿಂತ ಹೆಚ್ಚು ಮತ್ತು 40×60 ರವರೆಗೆ ಶೇ.20% ರಷ್ಟು ಮತ್ತು 40×60 ಕ್ಕಿಂತ ಹೆಚ್ಚು ಮತ್ತು 50×80 ರವರೆಗೆ ಶೇ.25% ರಷ್ಟು ದರವನ್ನು ನಿಗದಿಪಡಿಸಲಾಗಿದೆ. ಇದು ಈ ಹಿಂದಿನ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ಶೇ.50ರಷ್ಟು ಕಡಿಮೆಯಾಗಿದೆ” ಎಂದು ಹೇಳಿದರು.

ಪ್ರೋತ್ಸಾಹದಾಯಕ ನಿವೇಶನ ಸೌಲಭ್ಯ ಕೆಂಪೇಗೌಡ ಬಡಾವಣೆ ಸೇರಿದಂತೆ ಇತರೆಡೆಗಳಲ್ಲಿ ವ್ಯಾಜ್ಯವಿಲ್ಲದೆ ಸ್ವಇಚ್ಛೆಯಿಂದ ಆಸ್ತಿ ಬಿಟ್ಟು ಕೊಟ್ಟವರಿಗೆ ಒಂದು ಎಕರೆಗೆ 30×40 ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ವಿಶೇಷ ಪ್ರೋತ್ಸಾಹಕವಾಗಿ ನಿವೇಶನ ನೀಡುವ ಕಾರ್ಯ 2014 ರಿಂದ ಬಾಕಿ ಇದ್ದು, 1989 ಕಾನೂನಿನ ಪ್ರಕಾರ ಇದಕ್ಕಾಗಿ ಸೂಕ್ತ ಅರ್ಜಿ ಹಾಕಬೇಕು. ಇದಕ್ಕೆ ಬೆಲೆ ನಿಗದಿ ಮಾಡಲಾಗುವುದು. ಜಮೀನು ನೀಡಿದ ರೈತರ ಉಪಕಾರ ಸ್ಮರಣೆಯಾಗಿ ಅಲ್ಲಿ ನಾವು ವಾಲ್ ಆಪ್ ಗ್ರಾಟಿಟ್ಯೂಡ್ ಹಾಕಿದ್ದೇವೆ. ಇದು ಇಡೀ ದೇಶದ ಇತಿಹಾಸದಲ್ಲಿಯೇ ಮೊದಲು ಎಂದು ಹೇಳಿದರು. ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ನೀಡಿದ ರೈತರಿಗೆ ಒಂದೇ ದಿನದಲ್ಲಿ ಸೈಟ್ ಮಂಜೂರಾತಿಯನ್ನು ಪಾರದರ್ಶಕವಾಗಿ ಮಾಡಿರುವುದು ಬಿಡಿಎ ಇತಿಹಾಸದಲ್ಲೇ ಮೊದಲು ಎಂದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version