Connect with us

ಇತರ

ದಕ್ಷಿಣ ಕನ್ನಡ ಬೈಕಂಪಾಡಿಯ ಬೋಲಾಸ್ ಘಟಕದಿಂದ 1,240 ಕೆ.ಜಿ. ನಕಲಿ ಅಡುಗೆ ಎಣ್ಣೆ ಜಪ್ತಿ!

Published

on

ಮಂಗಳೂರು ನವೆಂಬರ್ 18: ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್‌ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ಲೋಪದೋಷಗಳನ್ನು ಎಸಗುತ್ತಿದ್ದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ (Bolas Agro Pvt Ltd) ಸಂಸ್ಥೆಯಿಂದ ಬರೋಬ್ಬರಿ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಸಿಬ್ಬಂದಿ ನಡೆಸಿದ ಅನಿರೀಕ್ಷಿತ ದಾಳಿಯ ವೇಳೆ ಈ ಅಕ್ರಮ ಕೃತ್ಯ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ವೇಳೆ ಘಟಕದಲ್ಲಿ ಗಂಭೀರ ಸ್ವರೂಪದ ಲೇಬಲಿಂಗ್ ಹಾಗೂ ಬ್ರ್ಯಾಂಡಿಂಗ್ ಲೋಪದೋಷಗಳು ಪತ್ತೆಯಾಗಿವೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಖರೀದಿಸಿದ ಕಚ್ಚಾ ಶೇಂಗಾ (ನೆಲಕಡಲೆ) ಎಣ್ಣೆಯನ್ನು ಇಲ್ಲಿಗೆ ತಂದು ಮರು-ಪ್ಯಾಕ್ ಮಾಡಲಾಗುತ್ತಿತ್ತು. ಬಳಿಕ ಅದನ್ನು ಅಸಲಿಯಾಗಿ ‘ಕೋಲ್ಡ್-ಪ್ರೆಸ್ಡ್’ (ಗಾಣದ) ಶೇಂಗಾ ಎಣ್ಣೆ ಎಂದು ಲೇಬಲ್ ಅಂಟಿಸಿ ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ದಾರಿತಪ್ಪಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದು ಗ್ರಾಹಕರ ಆರೋಗ್ಯದ ಜತೆ ಚೆಲ್ಲಾಟವಾಡುವ ಸ್ಪಷ್ಟ ಮಿಸ್‌ಬ್ರ್ಯಾಂಡಿಂಗ್ ಹಾಗೂ ವಂಚನೆ ಕೃತ್ಯವಾಗಿರುವುದರಿಂದ ಇಲಾಖೆಯು ತಕ್ಷಣವೇ ಜಪ್ತಿ ಕಾರ್ಯಾಚರಣೆ ಕೈಗೊಂಡಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮಾಹಿತಿಯ ಪ್ರಕಾರ, ದಾಳಿ ನಡೆಸಿ ಒಟ್ಟು ಈ ಕೆಳಗಿನ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ: ಶೇಂಗಾ ಎಣ್ಣೆಯ 11 ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಗೆ 10 ಕೆ.ಜಿ.) ಶೇಂಗಾ ಎಣ್ಣೆಯ 30 ಕ್ಯಾನ್‌ಗಳು (ಪ್ರತಿ ಕ್ಯಾನ್‌ಗೆ 35 ಲೀಟರ್) ಕೊಬ್ಬರಿ ಎಣ್ಣೆಯ 4 ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಗೆ 20 ಕೆ.ಜಿ.) ಒಟ್ಟಾರೆಯಾಗಿ ಲಕ್ಷಾಂತರ ಮೌಲ್ಯದ 1,240 ಕೆ.ಜಿ. ಗೂ ಅಧಿಕ ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಸ್ಥೆಯ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version