ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ಕನಸು ಹೊತ್ತು ಹಗಲಿರುಳು ಓದುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಸಾರ್ವಜನಿಕ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಹಾಗೂ ಭ್ರಷ್ಟಾಚಾರಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಮಹತ್ವದ ಹೆಜ್ಜೆಯಿಟ್ಟಿದೆ. ಹೌದು, ಪರೀಕ್ಷಾ ಅಕ್ರಮ ತಡೆಯುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ರೂಪಿಸಲಾದ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ನಿಯಮಗಳು, 2026 ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಎರಡು ತಿಂಗಳ ಹಿಂದೆ ಈ ಕರಡು ನಿಯಮವನ್ನ ಪ್ರಕಟಿಸಲಾಗಿತ್ತು, ಇದಕ್ಕೆ ಯಾವುದೇ ಆಕ್ಷೇಪಣೆ ಬಾರದ ಹಿನ್ನೆಲೆಯಲ್ಲಿ ಇದೀಗ ನಿಯಮಗಳನ್ನ ಅಂತಿಮಗೊಳಿಸಿ ಆದೇಶ ಹೊರಡಿಸಲಾಗಿದೆ. ನಕಲು ಮಾಡಿದರೆ ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಯಿಂದ ಬ್ಯಾನ್ ಹೊಸ ನಿಯಮಗಳ ಪ್ರಕಾರ, ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಾ ಅಥವಾ ಯಾವುದೇ ಅನುಚಿತ ವಿಧಾನಗಳನ್ನ ಅನುಸರಿಸುತ್ತಾ ಸಿಕ್ಕಿಬೀಳುವ ಅಭ್ಯರ್ಥಿಗಳಿಗೆ ಕಠಿಣ ಶಿಕ್ಷೆ ಕಾದಿದೆ. ಅಂತಹ ಅಭ್ಯರ್ಥಿಗಳನ್ನ ಕೇವಲ ಆಯಾ ಪರೀಕ್ಷೆಯಿಂದ ಮಾತ್ರವಲ್ಲದೆ, ರಾಜ್ಯದ ಇತರ ಎಲ್ಲ ನೇಮಕಾತಿ ಪ್ರಾಧಿಕಾರಗಳು ಹಾಗೂ ಮಂಡಳಿಗಳು ಭವಿಷ್ಯದಲ್ಲಿ ನಡೆಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನಗಳಿಂದ ಆಜೀವಪರ್ಯಂತ ಅನರ್ಹಗೊಳಿಸಲಾಗುತ್ತದೆ. ನಿಷೇಧಿತ ಅಭ್ಯರ್ಥಿಗಳ ಬ್ಲ್ಯಾಕ್ಲಿಸ್ಟ್ ಅನ್ನಾ ಎಲ್ಲಾ ನೇಮಕಾತಿ ಪ್ರಾಧಿಕಾರಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಆಯಾ ಜಿಲ್ಲೆಗಳಲ್ಲಿ ನಡೆಯುವ ಪರೀಕ್ಷೆಗಳ ಸಮಗ್ರ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿಗಳನ್ನೇ ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆಗೆ ಬ್ರೇಕ್
ಪ್ರಶ್ನೆಪತ್ರಿಕೆ ಸೋರಿಕೆಯನ್ನ ತಡೆಯಲು ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರ ಗುರುತನ್ನ ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ. ಮುದ್ರಣಾಲಯದಿಂದ ಪರೀಕ್ಷಾ ಕೇಂದ್ರದವರೆಗೆ ಪ್ರಶ್ನೆಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸುವುದು ಕಡ್ಡಾಯ. ಕ್ಯೂಆರ್ ಕೋಡ್ ಮತ್ತು ಬಾರ್ಕೋಡ್ ಬಳಕೆಯ ಜೊತೆಗೆ, ಪತ್ರಿಕೆಗಳನ್ನ ಜಿಲ್ಲಾ ಖಜಾನೆಯ ಡಬಲ್-ಲಾಕ್ ಸ್ಟ್ರಾಂಗ್ ರೂಂಗಳಲ್ಲಿ ಅತ್ಯಂತ ಭದ್ರವಾಗಿ ಸಂಗ್ರಹಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಬಯೋಮೆಟ್ರಿಕ್ ಪರಿಶೀಲನೆ, ಮುಖ ಗುರುತಿಸುವಿಕೆ , ಸಿಸಿಟಿವಿ ಕ್ಯಾಮರಾ, ಜಾಮರ್ಗಳು ಹಾಗೂ ಎಐ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅಭ್ಯರ್ಥಿಗಳಿಗೆ ಮಾತ್ರವಲ್ಲದೆ, ಕೊಠಡಿ ಮೇಲ್ವಿಚಾರಕರಿಗೂ ಮೊಬೈಲ್, ಸ್ಮಾರ್ಟ್ ವಾಚ್ ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನ ನಿಷೇಧಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಬ್ಲ್ಯಾಕ್ಲಿಸ್ಟ್
ಯಾವುದೇ ಶಿಕ್ಷಣ ಸಂಸ್ಥೆಗಳು ಅಥವಾ ಪರೀಕ್ಷಾ ಸೇವಾ ಪೂರೈಕೆದಾರ ಏಜೆನ್ಸಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವುದು ಸಾಬೀತಾದರೆ, ಅಂತಹ ಸಂಸ್ಥೆಗಳನ್ನ ಶಾಶ್ವತವಾಗಿ ಬ್ಲ್ಯಾಕ್ಲಿಸ್ಟ್ಗೆ ಸೇರಿಸಲಾಗುತ್ತದೆ. ಒಂದು ವೇಳೆ ಅಕ್ರಮ ನಡೆದು ಪರೀಕ್ಷೆ ರದ್ದಾಗಿ, ಮರುಪರೀಕ್ಷೆ ನಡೆಸುವ ಅನಿವಾರ್ಯತೆ ಎದುರಾದರೆ, ಮರುಪರೀಕ್ಷೆಗೆ ತಗಲುವ ಸಂಪೂರ್ಣ ವೆಚ್ಚವನ್ನ ನ್ಯಾಯಾಲಯದ ಮೂಲಕ ಅದೇ ತಪ್ಪಿತಸ್ಥ ಸಂಸ್ಥೆ ಅಥವಾ ವ್ಯಕ್ತಿಗಳಿಂದ ದಂಡ ವಸೂಲಿ ಮಾಡಲಾಗುತ್ತದೆ. ಅಲ್ಲದೆ, ಪರೀಕ್ಷಾ ಕೇಂದ್ರಗಳಿಗಾಗಿ ಯಾವುದೇ ಸರ್ಕಾರಿ, ಅನುದಾನಿತ ಅಥವಾ ಖಾಸಗಿ ಶಾಲಾ-ಕಾಲೇಜುಗಳನ್ನ ಸ್ವಾಧೀನಪಡಿಸಿಕೊಳ್ಳುವ ಪರಮಾಧಿಕಾರವನ್ನ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.