ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬಿಜೆಪಿ ಕುತಂತ್ರಕ್ಕೆ ಯಶಸ್ಸು ಸಿಗಲ್ಲ ನಮ್ಮ ಸರಕಾರ ಗಟ್ಟಿಯಾಗಿದೆ:ರಮಾನಾಥ್ ರೈ

Published

on

ಮಂಗಳೂರು: ಬಿಜೆಪಿ ನಾಯಕರು ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದು, ಸರ್ಕಾರಕ್ಕೆ ಕೆಟ್ಟ ಇಮೇಜ್ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಕಾರಣವಾಗಿರುವ ರಾಜ್ಯದ ಜನತೆ ಇವರ ಕುತಂತ್ರವನ್ನು ಅರ್ಥ ಮಾಡಿಕೊಳ್ಳುತ್ತಾರೆ. ನೀವು ಎಷ್ಟೇ ಕುತಂತ್ರ, ಅಸ್ಥಿರ ಮಾಡುವ ಪ್ರಯತ್ನಕ್ಕೆ ಯಶಸ್ಸು ಸಿಗಲ್ಲ, ನಮ್ಮ ಸರಕಾರ ಗಟ್ಟಿಯಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

 

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಆಯಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ವಾಸ್ತವದಲ್ಲಿ ಅವರಿಗೆ ಕಾಮಗಾರಿ ಕೈಗೆತ್ತಿಕೊಳ್ಳಲು ಮತ್ತು ಸರಕಾರದಿಂದ ಬಿಡುಗಡೆಯಾದ ಹಣ ಪಡೆಯಲು ಇಚ್ಛಾಶಕ್ತಿಯ ಕೊರತೆಯಿದೆ. ಈ ಹಿಂದೆ ನಾವು ವಿರೋಧ ಪಕ್ಷದ ಶಾಸಕರಾಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಾಮಗಾರಿಗಳಿಗೆ ಹಣ ನೀಡುವಲ್ಲಿ ವಿಫಲವಾಗಿತ್ತು ಎಂದು ಆರೋಪ ಮಾಡಿಲ್ಲ ಎಂದು ತಿಳಿಸಿದರು.

 

ವಿಧಾನಸಭಾ ಚುನಾವಣೆಗೂ ಮೊದಲು ಸರಕಾರದಿಂದ ಮಂಜೂರಾತಿ ಪಡೆಯದೆ ಆರಂಭಿಸಿದ್ದ ಎಲ್ಲ ಮುಂಗಡ ಕಾಮಗಾರಿಗಳನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಸ್ಥಗಿತಗೊಂಡಿವೆ. ಅಂತಹ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಿ ಕೈಗೆತ್ತಿಕೊಂಡ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲು ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.

 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸದೃಢವಾಗಿದ್ದು, ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದೆ. ಕಾಂಗ್ರೆಸ್ ಯಾವಾಗಲೂ ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರದ ಖಾತರಿ ಯೋಜನೆಗಳು ಬಡವರಿಗೆ ಅನುಕೂಲವಾಗಿದೆ. ಅಧಿಕಾರವಿಲ್ಲದೇ ಬಿಜೆಪಿ ನಾಯಕರು ನೀರಿಲ್ಲದ ಮೀನಿನಂತೆ ಇದ್ದಾರೆ. ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಉಚಿತ ನೀರು, ವಿದ್ಯುತ್ ನೀಡುವ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳಶಾಹಿಗಳ ಸಾಲವನ್ನು ಕಾಂಗ್ರೆಸ್ ಎಂದಿಗೂ ಕೂಡ ಮನ್ನಾ ಮಾಡಲಿಲ್ಲ. ಆದರೆ ಬಡವರ ಸಾಲಗಳನ್ನು ಮನ್ನಾ ಮಾಡಿದೆ ಎಂದರು.

 

ಜಿಲ್ಲೆಯಲ್ಲಿ ಮರಳಿನ ಕೊರತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನ್ ಸಿಆರ್‌ಝಡ್ ಮರಳು ಶೀಘ್ರದಲ್ಲೇ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಈ ಹಿಂದೆ ಶಾಸಕರ ಸಹಕಾರದಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಈಗ, ಅದನ್ನು ನಿಲ್ಲಿಸಲಾಗಿದೆ. ಅಕ್ರಮವಾಗಿ ಮರಳು ಸಿಗದ ಕಾರಣ ಕೊರತೆ ಉಂಟಾಗಿದೆ. ಸ್ಟಾಕ್‌ಯಾರ್ಡ್‌ನಲ್ಲಿ ನಾನ್‌ ಸಿಆರ್‌ಝಡ್ ಮರಳಿಗೆ ತೂಕದ ಸೇತುವೆ ಅಳವಡಿಸುವ ನಿಯಮವನ್ನು ರಾಜಕೀಯ ಒತ್ತಡಕ್ಕೆ ಮಣಿದು ಕಳೆದ ನಾಲ್ಕು ವರ್ಷಗಳಿಂದ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು. ಪ್ರಧಾನಿ ಮೋದಿಯವರು ಕೂಡಾ ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡ್ತಾ ಇದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಎಲ್ಲ ನಿಗಮದ ಸಾಲವನ್ನು ಮನ್ನಾ ಮಾಡಿದೆ. ಕೃಷಿ ಪಂಪ್ ಸೆಟ್ ಕೂಡ ಉಚಿತ ಮಾಡುವುದರ ಜೊತೆಗೆ ಬಡವರಿಗೆ ಬೇಕಾದ ಕಾರ್ಯಕ್ರಮ ಮಾಡಿದೆ ಎಂದರು.

 

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಲಿದೆ. ನಾವು ಅಭ್ಯರ್ಥಿಯ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಹೈಕಮಾಂಡ್ ಆಯ್ಕೆ ಮಾಡುವ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಿರಬಹುದು. ಆದರೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗಳನ್ನು ಗೆಲ್ಲುತ್ತೇವೆ ಎಂದು ರಮಾನಾಥ ರೈ ಹೇಳಿದರು.

 

ಮಾಜಿ ಶಾಸಕ ಜೆ.ಆರ್ ಲೋಬೊ, ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಹರೀಶ್ ಸಾಲ್ಯಾನ್, ಶಶಿಧರ್ ಹೆಗ್ಡೆ, ಧರಣೇಂದ್ರ ಕುಮಾರ್ ಸೇರಿದಂತೆ ಹಲವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version