ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕಡಬದಲ್ಲಿ ನಗರೋತ್ಥಾನ ಯೋಜನೆಯಡಿ ನಡೆದ ಕಾಮಗಾರಿಗಳ ಪರಿಶೀಲನೆ: ಜಿಲ್ಲಾಧಿಕಾರಿ ಪ್ರಶ್ನೆಗೆ ಎಂಜಿನಿಯರ್ , ಅಧಿಕಾರಿಗಳು ಬೆಬ್ಬೆಬ್ಬೆ!

Published

on

ಕಡಬದಲ್ಲಿ ನಗರೋತ್ಥಾನ ಯೋಜನೆಯಡಿ ನಡೆದ ಕಾಮಗಾರಿಗಳ ಪರಿಶೀಲನೆ ವೇಳೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿ ಗಳನ್ನು ಜಿಲ್ಲಾಧಿಕಾರಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ನಗರೋತ್ಥಾನ ಯೋಜನೆಯಡಿ 2.50 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳನ್ನು ಮಂಗಳವಾರ ಸಂಜೆ ಪರಿಶೀಲನೆ ನಡೆಸುವ ವೇಳೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರ ಆಕ್ರೋಶ ಕಂಡು ಅಧಿಕಾರಿಗಳು ಬೆಚ್ಚಿಬಿದ್ದರು.

ಕೋಡಿಂಬಾಳ ಗ್ರಾಮದ ಉಂಡಿಲ- ನೆಲ್ಲಿಪಡ್ಡು ಕಾಂಕ್ರೀಟ್ ರಸ್ತೆ (9.95 ಲಕ್ಷ ರೂ.), ಮಡ್ಯಡ್ಕ ಜನತಾ ಕಾಲೊನಿಯ ಕಾಂಕ್ರೀಟ್ ರಸ್ತೆ (9.27 ಲಕ್ಷ ರೂ.) ಹಾಗೂ ಕೋಡಿಂಬಾಳ ಸುವರ್ಣ ಸೌಧದ ಬಳಿ ನಿರ್ಮಾಣಗೊಂಡಿರುವ ಪೌರಕಾರ್ಮಿಕರ ವಸತಿಗೃಹ (20.49 ಲಕ್ಷ ರೂ.)ದ ಕಾಮಗಾರಿಗಳನ್ನು ಪರಿಶೀಲನೆ ಸಂದರ್ಭ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ಜಾರಿಕೊಂಡಾಗ ಎಂಜಿನಿಯರ್ ವಿರುದ್ಧ ಹರಿಹಾಯ್ದರು.

ಪೌರ ಕಾರ್ಮಿಕರ ವಸತಿಗೃಹದ ಕಾಮಗಾರಿಯನ್ನು ವೀಕ್ಷಣೆ ಮಾಡಿ ನಗರೋತ್ಪಾನ ಯೋಜನೆ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಕಟ್ಟಡದ ಅಂದಾಜುಪಟ್ಟಿ ನೀಡುವಂತೆ ಎಂಜಿನಿಯರ್ ಬಳಿ ಕೇಳಿದಾಗ ಅಂದಾಜುಪಟ್ಟಿ ಇಲ್ಲದೆ ತಬ್ಬಿಬ್ಬಾದ ಎಂಜಿನಿಯರ್ ಉತ್ತರಿಸಲು ತಡವರಿಸಿದರು. ಇದರಿಂದ ಕೆಂಡಾ ಮಂಡಲರಾದ ಡಿಸಿ, ಯಾವುದೇ ಸಿದ್ದತೆ ಮಾಡಿಕೊಳ್ಳದೇ ಯಾಕೆ ಬಂದಿದ್ದೀರಿ. ನಿಮ್ಮ ಬಳಿ ಒಂದು ಎಸ್ಟಿಮೇಟ್ ಪ್ರತಿ ಇಲ್ಲ, ಕಾಮಗಾರಿಯ ಗುಣಮಟ್ಟದ ಕುರಿತು ಖಾತರಿಯೂ ಇಲ್ಲ.

ನೀವು ಕಾಮಗಾರಿ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬಗ್ಗೆ ಯಾವ ದಾಖಲೆಗಳೂ ಇಲ್ಲ, ಕಚೇರಿಯಲ್ಲಿ ಕುಳಿತು ಬಿಲ್ ಮಾಡುವುದು ಬಿಟ್ಟರೆ ನಿಮಗೆ ಬೇರೆಕೆಲಸ ಇಲ್ಲ ಎಂದು ಕಾಣಿಸುತ್ತದೆ ಎಂದು ಹೇಳಿದರು. ಕಾಂಕ್ರೀಟ್ ರಸ್ತೆಗಳ ಪರಿಶೀಲನೆಯ ವೇಳೆಯೂ ಎಂಜಿನಿಯರ್ ಗಳು ಜಿಲ್ಲಾಧಿಕಾರಿಯವರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದಾಗ ಡಿಸಿ ಮತ್ತಷ್ಟು ಗರಂ ಆದರು. ನಿಮ್ಮ ಬೇಜವಾಬ್ದಾರಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.







ಕಡಬ ಗ್ರಾ.ಪಂ. ಆಡಳಿತದ ಸಂದರ್ಭ ದಲ್ಲಿ ಸುವರ್ಣ ಕರ್ನಾಟಕ ಯೋಜನೆಯ ಅನುದಾನದಡಿ ಹಲವು ವರ್ಷಗಳ ಹಿಂದೆ ನೆಲ್ಲಿಪಡ್ಡು (ಉಂಡಿಲ) ಬಳಿ ಸುಮಾರು 20 ಲಕ್ಷರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ಸೌಧ ಸಭಾಭವನ ಉಪಯೋಗವಿಲ್ಲದೆ ಪಾಳು ಬಿದ್ದಿರುವುದನ್ನು ಕಂಡ ಜಿಲ್ಲಾಧಿಕಾರಿ ಕಟ್ಟಡದ ಕೀ ತರಿಸಿಕೊಂಡು ಬಾಗಿಲು ತೆರೆಸಿ ಒಳಗಿನ ಅವ್ಯವಸ್ಥೆಯನ್ನು ಕಂಡು ಸರಕಾರಿ ಅನುದಾನ ಪೋಲಾಗುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜನರಿಗೆ ಯಾವುದೇ ಪ್ರಯೋಜನವಿಲ್ಲದ ಜಾಗದಲ್ಲಿ ಸಭಾಭವನ ಯಾಕೆ ನಿರ್ಮಿಸಿರುವಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಇಷ್ಟು ವಿಶಾಲವಾಗಿರುವ ಕಟ್ಟಡವನ್ನು ಯಾವುದಾದರೂ ರೀತಿಯಲ್ಲಿ ಉಪಯೋಗಕ್ಕೆ ಬರುವಂತೆ ಕ್ರಮ ಕೈಗೊಳ್ಳಲು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಜೋಬಿನ್ ಮಹಾಪಾತ್ರ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕ ಉದಯಕುಮಾರ್ ಶೆಟ್ಟಿ, ಎಇಇ ಅರುಣ್ ಕುಮಾರ್, ಕಡಬ ಪ.ಪಂ. ಮುಖ್ಯಾಧಿಕಾರಿ ಎಫ್.ಎನ್.ಹುಲ್ಲಿಕೇರಿ, ಕಡಬ ಉಪತಹಶೀಲ್ದಾರ್ ಮನೋಹರ್ ಕೆ.ಟಿ., ಕಂದಾಯ ನಿರೀಕ್ಷಕ ಪೃಥ್ವಿರಾಜ್, ಪ.ಪಂ. ಎಂಜಿನಿಯರ್ ಮಹಾವೀರ ಆರಿಗ, ಕಾಮಗಾರಿಗಳ ಕನ್ಸಲೆಂಟ್ ಪ್ರತಿನಿಧಿ ಗಿರೀಶ್ ಪ್ರಭು, ಎಂಜಿನಿಯರ್‌ಗಳಾದ ರೋಹಿತ್, ಗುರುಪ್ರಸಾದ್‌ ಮತ್ತಿತರರು ಜೊತೆಗಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement