Published
4 months agoon
By
Akkare News
ಹಾಸನ ಜಿಲ್ಲೆ ಸಕಲೇಶಪುರದ ಕೆಸವನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಚರಣೆಯನ್ನು ವಿಕ್ಷೀಸಲು ಡಿಸಿಎಂ ಡಿ ಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡದ್ದಾರೆ.
“ಎತ್ತಿಹೊಳೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಅಧಿಕಾರಿಗಳು ಈ ಯೋಜನೆಯ ವಿವರ ಮತ್ತು ವಿಡಿಯೋಗಳನ್ನು ತೋರಿಸಿದ್ದಾರೆ.ಆದರೂ ಸ್ಥಳಕ್ಕೆ ಬಂದು ನೋಡಬೇಕು ಅನ್ನೋ ಕಾರಣಕ್ಕೆ ಭೇಟಿ ನೀಡಿದ್ದೇನೆ. ಶೀಘ್ರವಾಗಿ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. “ಒಟ್ಟು 8 ವಿಯರ್ ಗಳಲ್ಲಿ 5 ವಿಯರ್ ಗಳಿಗೆ ಚಾಲನೆ ಕೊಡಲಾಗಿದೆ. ಈಗಾಗಲೇ 1,500 ಕ್ಯೂಸೆಕ್ಸ್ ನೀರನ್ನು ಮೇಲಕ್ಕೆ ಎತ್ತಲಾಗಿದೆ. ನೀರಿನ ಪ್ರಮಾಣ ಕಡಿಮೆ ಆಗೋ ಮೊದಲು ಒಳ್ಳೆ ದಿನ ನೋಡಿ ಸಿಎಂ ಅವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು.
7 ಜಿಲ್ಲೆ, 75 ಲಕ್ಷ ಜನರಿಗೆ ಅನುಕೂಲ:
“ಈ ಬೃಹತ್ ಯೋಜನೆಯಿಂದ ಒಟ್ಟು 24.01 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳಿಗೆ ಕುಡಿಯಲು ಪೂರೈಸಲಾಗುತ್ತದೆ. ಅಲ್ಲದೆ ಬರಪೀಡಿತ 29 ತಾಲೂಕಿನ 38 ಪಟ್ಟಣ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನ ಹಾಗೂ ಜಾನುವಾರುಗಳಿಗೆ 14.056 ಟಿಎಂಸಿ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಹಾಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ತುಮಕೂರು ವ್ಯಾಪ್ತಿಯ 527 ಕೆರೆಗಳಿಗೆ 9.953 ಟಿಎಂಸಿ ನೀರನ್ನು ಹರಿಸುವುದು ಕೂಡ ಈ ಯೋಜನೆಯ ಮುಖ್ಯ ಉದ್ದೇಶ.
“23,251 ಕೋಟಿ ರೂ ಮೊತ್ತದ ಈ ಯೋಜನೆಯಲ್ಲಿ ವಿಯರ್ 1,2,4,5 ಮತ್ತು 8ರಿಂದ 1571 ಕ್ಯೂಸೆಕ್ಸ್ ನೀರನ್ನು ಎತ್ತಿ ವಿತರಣಾ ತೊಟ್ಟಿ-3ಕ್ಕೆ ಪೂರೈಸಲಾಗುತ್ತದೆ. ಬಳಿಕ ಅಲ್ಲಿಂದ ವಿತರಣಾ ತೊಟ್ಟಿ-4ರ ಮೂಲಕ ಗುರುತ್ವ ಕಾಲುವೆಗಳ ಮೂಲಕ ನೀರನ್ನು ಹರಿ ಬಿಡಲಾಗುತ್ತದೆ. ಈ ನೀರ ಕಾಲುವೆ ಒಟ್ಟು 252.87 ಕಿ.ಮೀ ಉದ್ದವಿದ್ದು, ಈ ಪೈಕಿ 164 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಇನ್ನು 25.87 ಕಿ.ಮೀ ಗುರುತ್ವ ಕಾಲುವೆ ಕಾಮಗಾರಿ ನಡೆಯುತ್ತಿದೆ. ಈ ಮಧ್ಯೆ 42 ಕಿ.ಮೀ ನಂತರ ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಕಾಮಗಾರಿ ಅರ್ಥಕ್ಕೆ ನಿಂತಿದೆ. ಹೀಗಾಗಿ 32.50 ಕಿ.ಮೀ ನಂತರ ನೀರನ್ನು ನಾಲಾ ಎಸ್ಕೇಪ್ ಮುಖಾಂತರ 132.50 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ವೇದಾ ವ್ಯಾಲಿ ಮೂಲಕ ಸದ್ಯ ತಾತ್ಕಾಲಿಕ ಮಟ್ಟಕ್ಕೆ ನೀರನ್ನು ಹರಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
“ಒಂದಷ್ಟು ಕಡೆ ಅರಣ್ಯ ಇಲಾಖೆಗೆ ಸೇರಿದ ಭೂಮಿಯ ಸಮಸ್ಯೆಯಿದ್ದು, ಅದನ್ನು ಅರಣ್ಯ ಇಲಾಖೆಯವರ ಬಳಿ ನಾನು, ಸಿಎಂ ಅವರು ಮಾತನಾಡಿ ಬಗೆಹರಿಸಲಾಗುವುದು. ಈ ಯೋಜನೆಗಾಗಿ 2024ರ ಜುಲೈ ಅಂತ್ಯದರೆಗೆ 16,152 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಿದೆ. 31-03-2027ರೊಳಗೆ ಈ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಇನ್ನು ಈ ಯೋಜನೆಯಲ್ಲಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ ಜರ್ಮನಿ ಮೂಲದ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಆಗಸ್ಟ್ 20ರವರೆಗೆ ಒಟ್ಟು 13.34 ಟಿಎಂಸಿ ನೀರಿನ ಹರಿವು ದಾಖಲಾಗಿದೆ” ಎಂದು ಮಾಹಿತಿ ನೀಡಿದದರು.