Published
1 month agoon
By
Akkare Newsಪುತ್ತೂರು:ದ್ವಾರಕಾ ಪ್ರತಿಷ್ಠಾನದ ವತಿಯಿಂದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಬಸ್ ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ನ.9ರಂದು ನಡೆಯಿತು.
ಬಸ್ ತಂಗುದಾಣವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಅಭಿವೃದ್ಧಿ ಕಾರ್ಯ ಸರಕಾರದಿಂದ ಮಾತ್ರವಲ್ಲ. ಉದ್ಯಮಿಗಳೂ ಕೊಡುಗೆ ನೀಡಿದರೂ ಅಭಿವೃದ್ಧಿಗೆ ಪೂರಕವಾಗಲಿದೆ. ಹಣವನ್ನು ಯಾರೂ ಪ್ರಿಂಟ್ ಮಾಡುವುದಿಲ್ಲ. ಉದ್ಯಮಗಳ ಮೂಲಕ ಎಲ್ಲರೂ ಸಂಪಾದನೆ ಮಾಡುವುದು.
ನಂತರ ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಾರೆ. ಸಮಾಜಕ್ಕೆ ಅರ್ಪಣೆ ಮಾಡುವ ಮನೋಭಾವ ಕೆಲವರಿಗೆ ಮಾತ್ರ ಇರುವುದು. ಅಂತಹವರಲ್ಲಿ ದ್ವಾರಕಾ ಕನ್‌ಸ್ಟ್ರಕ್ಷನ್‌ವರು ಒಬ್ಬರು. ಸಮಾಜದಿಂದ ಗಳಿಸಿದ್ದನ್ನು ಅವರು ಸಮಾಜಕ್ಕೆ ಅರ್ಪಣೆ ಮಾಡಿದ್ದಾರೆ. ಎಲ್ಲಾ ಉದ್ಯಮಿಗಳಿಗೂ ನಿದರ್ಶನವಾಗುವ ರೀತಿಯಲ್ಲಿ ಮಾಡಿದ್ದಾರೆ. ಈ ರೀತಿಯಾಗಿ ಎಲ್ಲಾ ಉದ್ಯಮಿಗಳು ಮಾಡಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದ ಅವರು ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುವುದು ಎಂದು ಹೇಳಿದರು.
ರಸ್ತೆಗಳಲ್ಲಿ ಹೊಂಡ ಬಿದ್ದಿರುವ ಬಗ್ಗೆ ವೈರಲ್ ಆಗುತ್ತಿದೆ. ಅಧಿಕ ಮಳೆಯಿಂದಾಗಿ ದುರಸ್ಥಿ ಕಾಮಗಾರಿ ನಡೆಸಲು ಅಸಾಧ್ಯವಾಗಿತ್ತು. ಕಾಮಗಾರಿಗೆ ಟೆಂಡರ್ ಆಗಿದೆ. ಕೆಲಸಗಳು ಇಲಾಖೆಯ ನಿಯಮದಂತೆ ನಡೆಯಬೇಕಿದೆ. ಇನ್ನು ಕಲವೇ ದಿನಗಳಲ್ಲಿ ದುರಸ್ಥಿ ಕಾರ್ಯ ಮಾಡಲಾಗುವುದು. ಇದರ ಜೊತೆಗೆ ಇತರ ಎಲ್ಲಾ ಕಾಮಗಾರಿಗಳು ಆರಂಭವಾಗಲಿದೆ. ಮಂಗಳೂರಿನ ಕಂಪನಿಯೊಂದರಲ್ಲಿ ಸುಮಾರು ಇನ್ನೂರು ಮಂದಿಗೆ ಉದ್ಯೋಗಾವಕಾಶವಿದೆ. ರೂ.20 ಸಾವಿರ ವೇತನವಿದೆ. ಪಿಯುಸಿ ಉತ್ತೀರ್ಣರಾದವರು ಅರ್ಹರಾಗಿದ್ದು ಆಸಕ್ತರು ಕಚೇರಿಯನ್ನು ಸಂಪರ್ಕಿಸುವಂತೆ ಶಾಸಕರು ತಿಳಿಸಿದರು.
ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಮರೀಲ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯೆ ಶೈಲಾ ಪೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಗ್ರಾಮಾಂತರ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್, ನಗರ ಸಭಾ ನಾಮನಿರ್ದೇಶಿತ ಸದಸ್ಯ ರೋಶನ್ ರೈ, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ವಿಶ್ಚಜಿತ್ ಅಮ್ಮುಂಜ, ದ್ವಾರಕ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್, ಅಮೃತಕೃಷ್ಣ ಎನ್., ಅಶ್ವಿನಿ ಎನ್, ಅಮೃತಶಾಂಭವೀ ಹಾಗೂ ದ್ವಾರಕಾ ಪ್ರತಿಷ್ಠಾನದ ಸಿಬಂದಿಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅತಿಥಿಗಳನ್ನು ಶಾಲು ಹೊದಿಸಿ, ಸ್ಮರಣಿಕ ನೀಡಿ ಗೌರವಿಸಿದರು. ಸಿಬಂದಿ ದುರ್ಗಾಗಣೇಶ್ ಕೆ.ವಿ ಸ್ವಾಗತಿಸಿ, ವಂದಿಸಿದರು.