Published
4 weeks agoon
By
Akkare Newsಕರಾವಳಿಯ ವಾಣಿಜ್ಯ ಹೆಬ್ಟಾಗಿಲು, ನಿಸರ್ಗ ಚೆಲುವಿನ ಸಹಜ ತಿರುವು-ಮುರುವಿರುವ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಬಹು ನಿರೀಕ್ಷಿತ ದ್ವಿಪಥ ರಸ್ತೆ ಕಾಮಗಾರಿ ಸನ್ನಿಹಿತ ವಾಗಿದೆ. ಭೂಸ್ವಾಧೀನ, ಇಲಾಖೆಗಳ ಅನುಮತಿ ಪ್ರಕ್ರಿಯೆ ಸಹಿತ ಎಲ್ಲವೂ ಸುಸೂತ್ರವಾಗಿ ನಡೆದರೆ, ಕೆಲವೇ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.
ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್ (ಸಿಎಚ್‌ಎನ್‌ವಿ ರೆಡ್ಡಿ) ಕಂಪೆನಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಶೇ.41ರಷ್ಟು ಕಡಿಮೆ ಬಿಡ್ ಮಾಡುವ ಮೂಲಕ ಗುತ್ತಿಗೆದಾರರು ಈ ಕಾಮಗಾರಿಯನ್ನು ವಹಿಸಿಕೊಂಡಿದ್ದಾರೆ. ಪುಂಜಾಲಕಟ್ಟೆಯಿಂದ ಬಿ.ಸಿ.ರೋಡ್ ವರೆಗೆ ಈಗ ರಸ್ತೆ ಇರುವಷ್ಟೇ ಅಗಲದಲ್ಲಿ (10 ಮೀ. ಅಗಲ) ಚಾರ್ಮಾಡಿ ರಸ್ತೆ ದ್ವಿಪಥಗೊಳ್ಳಲಿದೆ. ಈಗ ಘಾಟಿಯ ಕೆಲವು ಕಡೆ 7 ಮೀ. ಹಾಗೂ ಬಹುತೇಕ ಕಡೆಗಳಲ್ಲಿ 5.50 ಮೀ. ಮಾತ್ರ ಅಗಲವಿದೆ.
ಚಾರ್ಮಾಡಿ ದ್ವಿಪಥಕ್ಕೆ 343 ಕೋ.ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಆದರೆ ರಸ್ತೆ ಕಾಮಗಾರಿ ಟೆಂಡರ್ 175 ಕೋ.ರೂ.ಗೆ ಆಗಿದೆ. ಉಳಿದ ಹಣವನ್ನು ಇತರ ಖರ್ಚುಗಳಿಗೆ ಬಳಸಲಾಗುತ್ತದೆ. ಚಾರ್ಮಾಡಿ ಆರಂಭದಲ್ಲಿ 900 ಮೀ. ವ್ಯಾಪ್ತಿಯಲ್ಲಿ ಖಾಸಗಿ ಭೂಮಿ ಇದ್ದು, ಕೆಲವು ಮನೆ, ಆವರಣ ಗೋಡೆ ಇದೆ. ಅದಕ್ಕೆಲ್ಲ ಪರಿಹಾರ ನೀಡಬೇಕಾಗುತ್ತದೆ. ವಿದ್ಯುತ್ ಕಂಬ, ಕುಡಿಯುವ ನೀರಿನ ಪೈಪ್ ಸ್ಥಳಾಂತರವಿದೆ. ಇದೆಲ್ಲದಕ್ಕೂ ಉಳಿದ ಹಣವನ್ನು ಮೀಸಲಿಡಲಾಗುತ್ತದೆ.
ಘಾಟಿಯ ಸುಮಾರು 25 ಕಿ.ಮೀ. ವ್ಯಾಪ್ತಿಯ ಪೈಕಿ 11 ಕಿ.ಮೀ. ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೂ ಉಳಿದ ಭಾಗ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಈಗ (12ನೇ ತಿರುವುವರೆಗೆ) ದ್ವಿಪಥ ಕಾಮಗಾರಿಗೆ ಅನುಮೋದನೆ ಆಗಿದೆ. ಚಿಕ್ಕಮಗಳೂರು ವ್ಯಾಪ್ತಿಯ ರಸ್ತೆ ಕಾಮಗಾರಿಗೆ ಸದ್ಯ ಡಿಪಿಆರ್ ನಡೆಯುತ್ತಿದೆ.
“ರಾಜ್ಯದ ಪ್ರಮುಖ ಹೆದ್ದಾರಿ ಚಾರ್ಮಾಡಿ ಘಾಟಿಯನ್ನು ಮೇಲ್ದರ್ಜೆಗೆ ಏರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಸುಗಮ ಸರಕು ಸಾಗಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ. ಆ ಮೂಲಕ ಕರ್ನಾಟಕದ ವಾಣಿಜ್ಯ ಹೆಬ್ಟಾಗಿಲು ಎಂದು ಗುರುತಿಸಿಕೊಂಡಿರುವ ಕರಾವಳಿ ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ’ಎನ್ನುತ್ತಾರೆ ಸಂಸದ ಕ್ಯಾ| ಬ್ರಿಜೇಶ್ ಚೌಟ.
ಕಾಮಗಾರಿ ಕಾಲಕ್ಕೆ ಸಂಚಾರ ಸಂಕಟ!
ಸದ್ಯದ ಮಾಹಿತಿ ಪ್ರಕಾರ ಕಾಮಗಾರಿಯು 48 ತಿಂಗಳೊಳಗೆ ಪೂರ್ಣವಾಗಬೇಕು. ಎಲ್ಲಿ ಸಾಧ್ಯ ಇದೆಯೋ ಅಲ್ಲೆಲ್ಲ ಸಂಚಾರ ಸುಧಾರಣೆಯನ್ನು ಕೈಗೊಂಡು ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಆ ವೇಳೆ ಘಾಟಿಯಲ್ಲಿ ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆ ಇದೆ. ಅನಿವಾರ್ಯವಾಗಿ ಸಂಚಾರ ಸ್ಥಗಿತ ಮಾಡಬೇಕಾಗಿ ಬಂದರೆ ಒಂದೆರಡು ತಿಂಗಳುಘಾಟಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಕಾಮಗಾರಿ ನಡೆಸುವ ಸಾಧ್ಯತೆಯೂ ಇದೆ.
ಅತಿ ಸೂಕ್ಷ್ಮ ಪಶ್ಚಿಮಘಟ್ಟ; ಮರಗಳ ಲೆಕ್ಕಾಚಾರ ಬಾಕಿ!
ಚಾರ್ಮಾಡಿ ಘಾಟಿ ಪ್ರದೇಶವು ಅಧಿಕ ಮಳೆಯಿಂದ ಕೂಡಿದ್ದು, ಅತಿ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶ. ಹಾಗಾಗಿ ಇಲ್ಲಿ ಸೀಮಿತ ಅಭಿವೃದ್ಧಿ ಕಾಮಗಾರಿಯನ್ನಷ್ಟೇ ಕೈಗೊಳ್ಳಬಹುದಾಗಿದೆ. ಆದರೂ ಈ ಭಾಗದ ರಸ್ತೆಯನ್ನು ಸುಗಮ ಸಂಚಾರಕ್ಕೆ ಕೇಂದ್ರ ಭೂಸಾರಿಗೆ ಮಂತ್ರಾಲಯದ 2024-25ನೇ ಸಾಲಿನ ಅನುಮೋದಿತ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ.
“ಚಾರ್ಮಾಡಿಯಲ್ಲಿ ಈ ಹಿಂದೆಯೇ 20 ಮೀ. ಅಗಲವನ್ನು ರಸ್ತೆಗಾಗಿ ನಮೂದು ಮಾಡಲಾಗಿದೆ. ಅರಣ್ಯ ಇಲಾಖೆ ನಕ್ಷೆಯಲ್ಲೂ ಹಾಗೆಯೇ ಇದೆ. ಮುಂದೆ ಈ ವ್ಯಾಪ್ತಿಯಲ್ಲಿರುವ ಮರಗಳು ಹಾಗೂ ಪರ್ಯಾಯ ವ್ಯವಸ್ಥೆ ಬಗ್ಗೆ ಅರಣ್ಯ ಇಲಾಖೆ ಜತೆಗೆ ಚರ್ಚಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಜತೆಗೆ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಯಂಟನಿ ಮರಿಯಪ್ಪ ಅವರು, “ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಮಗಾರಿಗೆ ಸಂಬಂಧಿಸಿ ಇನ್ನಷ್ಟೇ ಮರ ಗಿಡಗಳ ಲೆಕ್ಕಾಚಾರ ನಡೆಯಬೇಕಿದೆ. ಗುತ್ತಿಗೆದಾರರು ಈ ಕುರಿತು ಮನವಿ ಸಲ್ಲಿಸಿದ ಬಳಿಕ ಹಾಲಿ ರಸ್ತೆಯ ಅಕ್ಕಪಕ್ಕದಲ್ಲಿ ಅಗತ್ಯವಿರುವ ಭೂಮಿ ಹಾಗೂ ಅಲ್ಲಿ ಈಗ ಇರುವ ಮರಗಳ ಲೆಕ್ಕಾಚಾರ ಮಾಡಲಾಗುವುದು’ ಎನ್ನುತ್ತಾರೆ.
“ಟೆಂಡರ್ ಪ್ರಕ್ರಿಯೆ ಪೂರ್ಣ’
ಚಾರ್ಮಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಏಜೆನ್ಸಿಯವರಿಗೆ ಸ್ವೀಕಾರ ಪತ್ರ ಕೂಡ ನೀಡಲಾಗಿದೆ. ಇನ್ನು ಒಪ್ಪಂದ ಪ್ರಕ್ರಿಯೆ ಬಾಕಿ ಇದೆ. ಜನವರಿ ವೇಳೆಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.-ಶಿವಪ್ರಸಾದ್ ಅಜಿಲ, ಕಾರ್ಯಕಾರಿ ಅಭಿಯಂತರು, ರಾ.ಹೆದ್ದಾರಿ ವಿಭಾಗ, ಮಂಗಳೂರು
ಏನೆಲ್ಲ ಕಾಮಗಾರಿ?
-ಚಾರ್ಮಾಡಿ ಹಾಲಿ ರಸ್ತೆಯ ಅಕ್ಕಪಕ್ಕದ ಮರ, ಕಂಬ ತೆರವು, ಮಣ್ಣು ಸಮತಟ್ಟು
-ಹಾಲಿ ಇರುವ ರಸ್ತೆಯನ್ನು 10 ಮೀ. ಅಗಲಗೊಳಿಸಿ ದ್ವಿಪಥ ರಸ್ತೆ ರಚನೆ
-ರಸ್ತೆಯ ಉದ್ದಕ್ಕೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮೋರಿ, ತೋಡಿನ ರಚನೆ, ಕೆಲವೆಡೆ ಸೇತುವೆ ರಚನೆ
– ಗುಡ್ಡದ ಮಣ್ಣು ಜರಿದು ಬೀಳದಂತೆ ಸುಭದ್ರ ರಿಟೈನಿಂಗ್ ವಾಲ್, ಬಂಡೆ ಕಲ್ಲುಗಳು ಜಾರಿ ಬೀಳದಂತೆ ಮುನ್ನೆಚ್ಚರಿಕೆ ಕಾಮಗಾರಿ