Published
2 months agoon
By
Akkare Newsಪುತ್ತೂರು:ಅಕ್ರಮ ಸಕ್ರಮ ಕಡತ ವಿಲೇವಾರಿ ರಾಜ್ಯದಲ್ಲಿ ಒಂದೆರಡು ಕಡೆ ಬಿಟ್ರೆ ಎಲ್ಲೂ ಆಗುತ್ತಿಲ್ಲ, ಕರಾವಳಿಯ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇದುವರೆಗೂ ಒಂದೇ ಒಂದು ಕಡತ ವಿಲೇವಾರಿ ಮಾಡಿಲ್ಲ. ಕೊಟ್ಟ ಮಾತನ್ನು ಉಳಿಸುವುದು ನನ್ನ ಧರ್ಮ ಎಂಬ ಕಾರಣಕ್ಕೆ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡುತ್ತಿದ್ದೇನೆ, ಮುಂದೆಯೂ ನಡೆಯುತ್ತದೆ ಆದರೆ ನಾನು ಶಾಸಕನಾಗಿ ಮಾಡುತ್ತಿರುವ ಈ ಕೆಲಸದ ಬಗ್ಗೆ ಜನರಲ್ಲಿ ಕೃತಜ್ಞತಾ ಭಾವ ಇರಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಪಂ ಸಭಾಂಗಣದಲ್ಲಿ ಅಕ್ರಮ ಸಕ್ರಮ ಬೈಠಕ್ ಮತ್ತು ೯೪ ಸಿ ಹಾಗೂ ೯೪ ಸಿಸಿ ಹಕ್ಕು ಪತ್ರವನ್ನು ವಿತರಣೆ ಮಾಡಿ ಮಾತನಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಜನತೆ ಬುದ್ದಿವಂತರು ಮತ್ತು ತಿಳುವಳಿಕೆ ಉಳ್ಳವರಾಗಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಅಕ್ರಮ ಸಕ್ರಮ ನಡೆಯುತ್ತಿಲ್ಲ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಪುತ್ತೂರು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಹಳೆಯ ಕಾಲದ ಅರ್ಜಿಗಳೂ ಇವೆ
ಈ ಹಿಂದಿನ ಅವಧಿಯಲ್ಲಿ ಪುತ್ತೂರಿನಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಲಾಗಿದೆ. ಯಾರಿಗೆಲ್ಲಾ ಆಗಿದೆ ಎಂದು ನನಗೆ ಗೊತ್ತಿಲ್ಲ ಆದರೆ ಈಗಾಗಲೇ ತಾಲೂಕು ಕಚೇರಿಯಲ್ಲಿ ಧೂಳು ಹಿಡಿಯುತ್ತಿದ್ದ ಫೈಲುಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಪಕ್ಷಾತೀತವಾಗಿ, ಭೃಷ್ಟಾಚಾರ ರಹಿತವಾಗಿ ಜನತೆಗೆ ಹಕ್ಕು ಪತ್ರವನ್ನು ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಈ ಹಿಂದೆ ಬಾಕಿ ಇದ್ದ ಕಡತಗಳನ್ನು ಯಾಕೆ ವಿಲೇವಾರಿ ಮಾಡಿಲ್ಲ ಎಂದು ನಾನು ಕೆದಕಲು ಹೋಗುವುದಿಲ್ಲ, ಉಳ್ಳವರದ್ದು ಅಕ್ರಮ ಸಕ್ರಮ ಮಂಜೂರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
೩೦ ಸೆಂಟ್ಸ್ ಜಾಗಕ್ಕೆ ವರ್ಷಗಟ್ಟಲೆ ಕಾಯಬೇಕ?
ನಮ್ಮ ಜಿಲ್ಲೆಯ ಜನರು ಬಹಳ ಸ್ವಾಭಿಮಾನಿ ಮನೋಭಾವದವರು. ಗೌರವಕ್ಕೆ ಅಂಜುವ ಸ್ವಭಾವದವರು ಈ ಕಾರಣಕ್ಕೆ ನಮಗೆ ಬೇಕಾದ್ದನ್ನು ಪಡೆಯಲು ನಾವು ಎಲ್ಲೂ ಹೋರಾಟ ಮಾಡುತ್ತಿಲ್ಲ. ೨೦ ರಿಂದ ೩೦ ಸೆಂಟ್ಸ್ ಜಾಗವನ್ನು ಸಕ್ರಮ ಮಾಡಿ ಎಂದು ಅರ್ಜಿ ಹಾಕಿ ವರ್ಷಗಟ್ಟಲೆ ಕಾಯುತ್ತಿದ್ದಾರೆ. ಯಾಕೆ ಬವರಿಗೆ ಈ ಜಾಗವನ್ನು ಸಕ್ರಮ ಮಾಡಿಕೊಟ್ಟಿಲ್ಲ ಎಂಬ ವಿಚಾರ ತಿಳಿದಾಗ ನೋವಾಗುತ್ತದೆ. ಜನಪ್ರತಿನಿಧಿಗಳಿಗೆ ಲಂಚ ಕೊಡಲು ಹಣವಿಲ್ಲ ಎಂಬ ಏಕೈಕ ಕಾರಣಕ್ಕೆ ಬಡವರ ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದು ಶಾಸಕರು ಖೇದ ವ್ಯಕ್ತಪಡಿಸಿದರು.
ನೀವು ದುಡ್ಡು ಕೊಡಬೇಡಿ
ಅಕ್ರಮ ಸಕ್ರಮ ಅಥವಾ ೯೪ ಸಿ ಹಕ್ಕು ಪತ್ರ ಪಡೆಯಲು ಯಾರಿಗೂ ಲಂಚ ಕೊಡಬೇಡಿ ಎಂದು ನಾನು ಆರಂಭದಿಂದಲೇ ಹೇಳುತ್ತಿದ್ದೇನೆ ಆದರೂ ಕೆಲವರು ದುಡ್ಡು ಕೊಡುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ನನಗೆ ಯಾರ ದುಡ್ಡೂ ಬೇಡ, ನನ್ನ ಹೆಸರು ಹೇಳಿ ಲಂಚ ತೆಗೆದುಕೊಳ್ಳುವುದನ್ನೂ ನಾನು ಸಹಿಸುವುದಿಲ್ಲ. ಬಡವರ ರಕ್ತ ಹೀರುವುದನ್ನು ನಾನು ಸಹಿಸುವ ಪ್ರಶ್ನೆಯೇ ಇಲ್ಲ. ಅರ್ಜಿ ಹಾಕಿದವರು ನೇರವಾಗಿ ನನ್ನ ಕಚೇರಿಗೆ ಬಂದು ಮಾಹಿತಿ ನೀಡಿ ಎಂದು ಶಾಸಕರು ಮನವಿ ಮಾಡಿದರು.
ಅಕ್ರಮ ಸಕ್ರ ೨೩೪ ಕಡತ ಮತ್ತು ೧೨೧ ೯೪ ಸಿ ಹಕ್ಕು ಪತ್ರ ವಿತರಣೆ
ಅಕ್ರಮ ಸಕ್ರಮ ಬೈಠಕ್ ನಲ್ಲಿ ಒಟ್ಟು ೨೩೪ ಅಕ್ರಮ ಸಕ್ರಮ ಕಡತಗಳು ವಿಲೇವಾರಿಯಾಗಿದೆ. ೧೨೧ ೯೪ ಸಿ ಮತ್ತು ೯೪ ಸಿಸಿ ಹಕ್ಕು ಪತ್ರವನ್ನು ನೀಡಲಾಗಿದೆ.ಕೆಯ್ಯೂರು, ಕೊಳ್ತಿಗೆ, ಆರ್ಯಾಪು, ನೆ.ಮುಡ್ನೂರು,ಪಡುವನ್ನೂ, ಮಾಡ್ನೂರು, ಬಡಗನ್ನೂರು, ಶಾಂತಿಗೋಡು, ಸರ್ವೆ, ಮುಂಡೂರು, ನರಿಮೊಗ್ರು, ಒಳಮೊಗ್ರು, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ಬಲ್ನಾಡು, ಕೆದಂಬಾಡಿ, ಪುತ್ತೂರು ಕಸಬಾ,ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಯಿತು.
ನಾನು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನವನ್ನು ತರುತ್ತಿದ್ದೇನೆ, ಕುಡಿಯುವ ನೀರಿಗಾಗಿ ೧೦೧೦ ಕೋಟಿ ತಂದಿದ್ದೇನೆ , ಪೈಪ್ ಲೈನ್ ಕೆಲಸ ಭರದಿಂದ ಸಾಗುತ್ತಿದೆ, ಉದ್ಯಮಗಳು ಆರಂಭವಾಗಲಿದೆ, ಬೃಹತ್ ಕ್ರೀಡಾಂಗಣ ನಿರ್ಮಾಣವಾಗಲಿದೆ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿಯಾಗಲಿದೆ ಇಷ್ಟೆಲ್ಲಾ ಕೆಲಸ ಮಾಡಲು ನಿಮ್ಮೆಲ್ಲರ ಸಹಕಾರ, ಬೆಂಬಲ ಅಗತ್ಯವಾಗಿದೆ.
ಅಶೋಕ್ ರೈ ಶಾಸಕರು
ಪುತ್ತೂರು ಕ್ಷೇತ್ರದಲ್ಲಿ ಭೂ ಕ್ರಾಂತಿಯೇ ನಡೆಯುತ್ತಿದೆ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಭೂ ಕ್ರಾಂತಿಯೇ ನಡೆಯುತ್ತಿದೆ. ಯಾರೆಲ್ಲಾ ಸರಕಾರಿ ಜಾಗದಲ್ಲಿ ಕಾನೂನಾತ್ಮಕವಾಗಿ ಕೃಷಿ ಚಟುವಟಿಕೆಯನ್ನು ಮಾಡುತ್ತಾ ಭೂಮಿಯನ್ನು ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದಾರೋ ಅಂಥವರ ಅರ್ಜಿಗಳನ್ನು ಪರಿಸೀಲಿಸಿ ಕಾನೂನು ಪ್ರಕಾರವಾಗಿಯೇ ಅವರಿಗೆ ಹಕ್ಕು ಪತ್ರವನ್ನು ನೀಡಲಾಗುತ್ತದೆ. ಇಂದು ನಡೆದ ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಸುಮಾರು ೧೮೦ ಎಕ್ರೆಗೂ ಮಿಕ್ಕಿ ಭೂಮಿಯನ್ನು ಅದರ ವಾರಿಸುದಾರರಿಗೆ ನೀಡಲಾಗಿದೆ. ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಪುತ್ತೂರು ರಾಜ್ಯದಲ್ಲೇ ನಂಬರ್ ೧ ಆಗಿದ್ದು ಶಾಸಕ ಅಶೋಕ್ ರೈ ಅವರ ಕಾರ್ಯಕ್ಷಮತೆಗೆ ಉಧಾಹರಣೆಯಾಗಿದೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹೇಳಿದರು.
ಶಾಸಕರಿಗೆ ಬಡವರ ಮೇಲೆ ಅಪಾರ ಕಾಳಜಿ ಇದೆ: ತಹಶಿಲ್ದಾರ್
ಪುತ್ತೂರು ಶಾಸಕರಿಗೆ ಬಡವರ ಮೇಲೆ ಅಪಾರ ಕಾಳಜಿ ಇದೆ ಇದೇ ಕಾರಣಕ್ಕೆ ಪುತ್ತೂರಿನಲ್ಲಿ ಮಾತ್ರ ಅಕ್ರಮ ಸಕ್ರಮ ಕಡತವಿಲೇವಾರಿ ನಡೆಯುತ್ತಿದೆ. ಬಡವರಿಗೆ ಅಕ್ರಮ ಸಕ್ರಮ, ೯೪ ಸಿ ಮತ್ತು ಸಿ ಸಿ ಹಾಗೂ ಮನೆ ನಿವೇಶನಕ್ಕೆ ಈಗಾಗಲೇ ಜಾಗವನ್ನು ಕಾಯ್ದಿರಿಸಿದ್ದಾರೆ. ಬಡವರಿಗೆ ನೆರವು ನೀಡುವುದು ಅವರ ಪ್ರಿಯವಾದ ಕೆಲಸವಾಗಿದೆ. ಇಂಥಹ ಶಾಸಕರನ್ನು ಪಡೆದ ಜನರು ಧನ್ಯರು ಎಂದು ತಹಶಿಲ್ದಾರ್ ಪುರಂದರ್ ಹೆಗ್ಡೆ ಹೇಳಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿ, ಗ್ರಾಮಕರಣಿಕ ಉಮೇಶ್ ಕಾವಡಿಗ ಕಾರ್ಯಕ್ರಮ ನಿರೂಪಿಸಿದರು.