Published
2 months agoon
By
Akkare News
ಪುತ್ತೂರು.04: ಪಡುಮಲೆ ಬಿಟ್ಟ ಕೋಟಿ ಚೆನ್ನಯರು ಇಲ್ಲಿ ಬಂದು ಕುಳಿತ ಕಾರಣದಿಂದಲೇ ಏನೋ ಇಲ್ಲಿ ವರ್ಷದ ಪ್ರಥಮ ಬೈದೇರುಗಳ ನೇಮೋತ್ಸವ ನಡೆಯುತ್ತಿದೆ. ಬಹಳ ವರ್ಷಗಳ ಹಿಂದೆ ಬೈದೇರುಗಳಿಗೆ ಕೇವಲ ತಂಬಿಲ ಸೇವೆ ನಡೆಯುತ್ತಿತ್ತು. ಬೈದೇರುಗಳಿಗೆ ನೇಮೋತ್ಸವ ಆರಂಭವಾದುದೇ ಇಲ್ಲಿ ಎಂದು ಹೇಳಲಾಗಿದೆ. ಜಿಲ್ಲೆಯ ಅತ್ಯಂತ ಪ್ರಾಚೀನ ಗರಡಿ ಇದಾಗಿದ್ದು, ಇಲ್ಲಿ ಆದಿ ಉತ್ಸವ ನಡೆಯುತ್ತದೆ. ಪೆರಾರ್ದೆ ತಿಂಗಳ ಹುಣ್ಣಿಮೆಯ ದಿನದಂದು ಇಲ್ಲಿ ಪ್ರತೀವರ್ಷ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ.


ಪಡುಮಲೆ ಅರಮನೆ ಬಿಟ್ಟ ಕೋಟಿ ಚೆನ್ನಯರು ಸುತ್ತಾಡುತ್ತಾ ಬಂದು ಒಂದು ಕಡೆ ಕಟ್ಟೆಯಲ್ಲಿ ಕುಳಿತು ಹಾಲು ಕುಡಿಯುತ್ತಾರೆ. ಹಾಲು ಕುಡಿದು ತೇಗಿದ (ತುಳುವಿನಲ್ಲಿ ‘ಅರಿಗ’) ಸ್ಥಳವೇ ಪುತ್ತೂರು ತಾಲೂಕಿನ ಈಗಿನ ಚಿಕ್ಕಮುನ್ನೂರು ಗ್ರಾಮದ ಮೂಡಾಯುರುಗುತ್ತು ಆರಿಗೊ ಸ್ಥಳವಾಗಿದೆ. ಇಲ್ಲಿಗೆ ಅರಿಗೋ ಎಂಬ ಹೆಸರು ಬರಲೂ ಇದೇ ಕಾರಣ ಎಂದು ಪ್ರತೀತಿ ಇದೆ. ಈ ಗರಡಿ ಕೋಟಿ ಚೆನ್ನಯರ ನೇಮೋತ್ಸವಕ್ಕೆ ಆದಿ ಗರಡಿ ಎಂದೇ ಖ್ಯಾತಿಯಾಗಿದೆ. ಸುಮಾರು 185 ವರ್ಷಗಳ ಹಿಂದೆಯೇ ಇಲ್ಲಿ ಬೈದೇರುಗಳ ನೇಮೋತ್ಸವ ನಡೆಯುತ್ತಿತ್ತು ಎಂಬುದಕ್ಕೆ ಇಂದಿಗೂ ದಾಖಲೆಗಳಿವೆ. ಲಭ್ಯವಾಗಿರುವ ದಾಖಲೆಯಲ್ಲಿ ಪ್ರಜೋತ್ಪತ್ತಿ ಸಂವತ್ಸರ ಎಂದು ನಮೂದಿಸಲಾಗಿರುವುದರಿಂದ ಸುಮಾರು 185 ವರ್ಷಗಳ ಹಿಂದಿನದ್ದು ಎಂದು ಲೆಕ್ಕಾಚಾರ ಹಾಕಬಹುದಾಗಿದೆ. 
ಎತ್ತರದಲ್ಲಿರುವ ಬ್ರಹ್ಮರಗುಂಡ ಗರಡಿಯ ಮೇಲ್ಬಾಗದಲ್ಲಿ ಸುಮಾರು 200 ವರ್ಷಗಳಷ್ಟು ಪುರಾತನವಾದ ‘ಬ್ರಹ್ಮರಗುಂಡ’ ಸ್ಥಳವಿದೆ. ಬಹಳ ಹಿಂದೆ ನೇಮೋತ್ಸವ ಇಲ್ಲಿಯೇ ನಡೆಯುತ್ತಿತ್ತು. ಈಗಲೂ ಅಲ್ಲಿ ದೀಪ ಉರಿಸಿ ಕೋಟಿ ಚೆನ್ನಯರ ನೇಮ ನಡೆಯುತ್ತದೆ. ಯಾವುದೇ ವಿದ್ಯುತ್ ದೀಪಗಳಿಲ್ಲದೇ ಕೇವಲ ದೊಂದಿ ಬೆಳಕಿನಲ್ಲಿ ಕೋಟಿ ಚೆನ್ನಯರ ನರ್ತನ ನಡೆಯುತ್ತದೆ. ಇಲ್ಲಿಗೆ ಮಹಿಳೆಯರ ಪ್ರವೇಶವೂ ನಿಷಿದ್ಧವಾಗಿದೆ.










