ವಿಟ್ಲ: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಪಿಕಪ್ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕ್ಟಿವಾ ಸವಾರ ಮೃತಪಟ್ಟ ಘಟನೆ ಸೋಮವಾರ (ಮೇ 18) ಸಂಭವಿಸಿದೆ. ಕಬಕ ನಿವಾಸಿ, ಸೋಫಾ ಹಾಗೂ ವಾಹನಗಳ ಕುಶನ್ ಕೆಲಸ ಮಾಡಿಕೊಂಡಿದ್ದ ಸಲೀಂ (52) ಮೃತಪಟ್ಟವರು ಸಲೀಂ ಅವರು ಮಿತ್ತೂರು ದಾರುಲ್ ಇಸ್ಲಾಂ ಶಿಕ್ಷಣ ಸಂಸ್ಥೆಯ ವಾಹನದ ಕೆಲಸವನ್ನು ನೋಡಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಕಬಕ ಕಡೆಯಿಂದ ಮಿತ್ತೂರು ಕಡೆಗೆ ಮಿತಿಮೀರಿದ ವೇಗದಲ್ಲಿ ಬಂದ ಪಿಕಪ್ ವಾಹನವು ಸಲೀಂ ಅವರ ಆಕ್ಟಿವಾ ಸ್ಕೂಟರ್ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಸಲೀಂ ಅವರು ಹೆಲ್ಮೆಟ್ ಧರಿಸಿದ್ದರೂ ಅವರ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕೂಟರ್ಗೆ ಢಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆ ಬದಿಯ ದಿಬ್ಬಕ್ಕೆ ಪಲ್ಟಿ ಹೊಡೆದಿದೆ.