Published
5 months agoon
By
Akkare Newsಪುತ್ತೂರು: 9/11 ದಾಖಲೆಯನ್ನು ಸ್ಥಳೀಯವಾಗಿಯೇ ಜನರಿಗೆ ನೀಡಬೇಕು , ಈಗ ಇರುವ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ , ಜಿಲ್ಲಾ ಕೇಂದ್ರಗಳಲ್ಲಿ ನೀಡುತ್ತಿದ್ದ 9/11 ದಾಖಲೆ ಪತ್ರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿಧಾನ ಸಭಾ ಅಧಿವೇಶನದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಸರಕರವನ್ನು ಆಗ್ರಹಿಸಿದ್ದು ಈ ಸಂಬಂಧ ಸರಕಾರ ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು ಇನ್ನು ಮುಂದೆ ತಾಲೂಕು ಕೇಂದ್ರದಲ್ಲೇ 9/11 ದಾಖಲೆ ಪತ್ರ ದೊರೆಯಲಿದೆ.
ಸರಕಾರದ ಅಧಿಸೂಚನೆಯಲ್ಲಿ ಈ ರೀತಿ ಇದೆ:
ಕರಾವಳಿ ಭಾಗದಲ್ಲಿ ಬರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಸತಿ ಮತ್ತು ವಾಣಿಜ್ಯ ಭೂಪರಿವರ್ತಿತ ಜಮೀನುಗಳ ಏಕ ನಿವೇಶನ ವಿನ್ಯಾಸಗಳಿಗೆ ಅನುಮೋದನೆ ನೀಡುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸನ್ಮಾನ್ಯ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ದಿನಾಂಕ 25/07/2024 ರಂದು ಜರುಗಿದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು:
ಶಾಸಕರು ಈ ಹಿಂದೆ 25 ಸೆಂಟ್ಸ್ ವಿಸ್ತೀರ್ಣವರೆಗಿನ ಜಮೀನುಗಳಿಗೆ ಗ್ರಾಮ ಪಂಚಾಯಿತಿಗಳಿಂದ; 25 ಸೆಂಟ್ಸ್ ಮೇಲ್ಪಟ್ಟು ಒಂದು ಎಕರೆವರೆಗಿನ ಜಮೀನುಗಳಿಗೆ ತಾಲ್ಲೂಕು ಪಂಚಾಯಿತಿಗಳಿಂದ; ಒಂದು ಎಕರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನುಗಳಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ವಿನ್ಯಾಸಗಳಿಗೆ ಅನುಮೋದನೆ ಪಡೆದು ನಮೂನೆ 9ಮತ್ತು 11 ಗಳನ್ನು ಈ ಹಿಂದೆ ನೀಡಲಾಗುತ್ತಿದ್ದ ಬಗ್ಗೆ ಸಭೆಗೆ ವಿವರಿಸಿ ಪ್ರಸ್ತುತ ಸರ್ಕಾರದಿಂದ ಹೊರಡಿಸಲಾಗಿರುವ ಆದೇಶದ ಹಿನ್ನೆಲೆಯಲ್ಲಿ ಮಿತಿ ಇಲ್ಲದೇ ಎಲ್ಲ ಜಮೀನುಗಳಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ವಿನ್ಯಾಸ ಅನುಮೋದನೆ ಪಡೆಯಬೇಕಾಗಿರುವುದರಿಂದ ಕರಾವಳಿ ಭಾಗದಲ್ಲಿನ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಕರಾವಳಿ ಭಾಗದಲ್ಲಿನ ಗ್ರಾಮಪಂಚಾಯಿತಿ ವ್ಯಾಪ್ತಿಯಿಂದ ಜಿಲ್ಲಾ ಕೇಂದ್ರದವರೆಗೆ ಸಾರ್ವಜನಿಕರು ಸಂಪರ್ಕ ಹೊಂದುವ ಸಮಸ್ಯೆಯನ್ನು ನಿವಾರಿಸಲು ಜಿಲ್ಲಾ ಕೇಂದ್ರದೊಂದಿಗೆ ಜಿಲ್ಲೆಯಲ್ಲಿ ವಿವಿಧ ಯೋಜನಾ ಪ್ರಾಧಿಕಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವುದರೊಂದಿಗೆ ಯೋಜನಾ ಪ್ರಾಧಿಕಾರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ತೀರ್ಮಾನಿಸಲಾಗಿರುತ್ತದೆ.
ಸದರಿ ಸಭೆಯ ತೀರ್ಮಾನದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ನಿಗಧಿಪಡಿಸಲು ನಿರ್ಣಯಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಮುಡಾದಿಂದ ಪುಡಾಕ್ಕೆ ಶಿಫ್ಟ್
ಕಳೆದ ನಾಲ್ಕು ತಿಂಗಳಿಂದ 9/11 ದಾಖಲೆಯನ್ನು ಪಡೆಯಲು ಮಂಗಳೂರಿನ ಮುಡಾಕ್ಕೆ ತೆರಳಬೇಕಿತ್ತು. ಇದು ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಮತ್ತು ಕಡತಗಳ ವಿಲೇವಾರಿ ತಡವಾಗುತ್ತದೆ . ಕಡತ ವಿಲೇವಾರಿ ತಡವಾಗುವುದರಿಂದ ಮನೆ ಕಟ್ಟುವವರಿಗೂ ತೀವ್ರ ತೊಂದರೆಯುಂಟಾಗುತ್ತಿರುವ ಬಗ್ಗೆ ಶಾಸಕ ಅಶೋಕ್ ರೈ ಯವರು ಸದನದಲ್ಲಿ ಸರಕಾರದ ಗಮನ ಸೆಳೆದಿದ್ದರು.
ಆ ಬಳಿಕ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರು ಕಂದಾಯ ಅಧಿಕಾರಿಗಳ ಮತ್ತು ಕರಾವಳಿ ಭಾಗದ ಶಾಸಕರ ಸಭೆಯನ್ನು ಕರೆದು ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದರು. ಪುಡಾದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡುವ ಮೂಲಕ 9/11 ಖಾತೆಯನ್ನು ಪುಡಾದಲ್ಲಿ ನೀಡಲು ಸರಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲೇ ಗ್ರಾಮೀಣ ಜನರಿಗೆ 9/11 ದೊರೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.
9/11 ಬಗ್ಗೆ ಇದ್ದ ಜನರ ಸಂಕಷ್ಟವನ್ನು ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು ತಾಲೂಕು ಕೇಂದ್ರದಲ್ಲೇ ಅದನ್ನು ನೀಡುವಂತೆ ಕಂದಾಯ ಅದಿಕಾರಿಗಳ ಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದೆ. ನನ್ನ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಜೊತೆಗೆ ಕರಾವಳಿ ಭಾಗಕ್ಕೆ ಎಲ್ಲಾ ತಾಲೂಕುಗಳಿಗೆ ಅನ್ವಯವಾಗುವಂತೆ ಅಧಿಸೂಚನೆಯನ್ನು ಹೊರಡಿಸಿದೆ. ಮುಂದಿನ ಕೆಲವೇ ದಿನಗಳಲ್ಲಿ ಪುತ್ತೂರು ಪುಡಾದಲ್ಲಿ 9/11ಖಾತೆ ದೊರೆಯಲಿದೆ. ಜನರು ಇನ್ನು ಸಂಕಷ್ಟಪಡುವ ಅಗತ್ಯವಿಲ್ಲ.
ಅಶೋಕ್ ರೈ ಶಾಸಕರು ಪುತ್ತೂರು