Published
14 hours agoon
By
Akkare News
ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ 2026 ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದಕ್ಕಿದೆ. ಭಾನುವಾರ (ಜು.26) ಮಹಿಳೆಯರ 48 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸ್ಟಾರ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಮೀರಾಬಾಯಿ ಚಾನು 85 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಕಾಮನ್ವೆಲ್ತ್ ಗೇಮ್ಸ್ ದಾಖಲೆಯನ್ನು ಮುರಿದರು. ತಮ್ಮ ಮೊದಲ ಪ್ರಯತ್ನದಲ್ಲಿ 82 ಕೆಜಿ ಎತ್ತಲು ವಿಫಲರಾದ ಚಾನು, ಎರಡನೇ ಪ್ರಯತ್ನದಲ್ಲಿ ಅದನ್ನು ಪೂರ್ಣಗೊಳಿಸಿದರು ಮತ್ತು ತಮ್ಮ ಕೊನೆಯ ಪ್ರಯತ್ನದಲ್ಲಿ ಗೇಮ್ಸ್ ದಾಖಲೆಯನ್ನು ಧೂಳಿಪಟ ಮಾಡಿದರು.
ಮೀರಾಬಾಯಿ ಚಾನು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇದುವರೆಗೆ ಒಟ್ಟು 3 ಚಿನ್ನ ಮತ್ತು 1 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅವರು 2014ರ ಗ್ಲಾಸ್ಗೋ ಗೇಮ್ಸ್ನಲ್ಲಿ ಬೆಳ್ಳಿ, 2018ರ ಗೋಲ್ಡ್ ಕೋಸ್ಟ್ನಲ್ಲಿ ಚಿನ್ನ ಮತ್ತು 2022ರ ಬರ್ಮಿಂಗ್ಹ್ಯಾಮ್ನಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.
ಈಗ 2026ರಲ್ಲಿ ʼಗೋಲ್ಡ್ʼ ಗೆದ್ದು ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದಾರೆ.
ಬೆಳ್ಳಿ ಪದಕವನ್ನು ನೈಜೀರಿಯಾ ಗೆದ್ದುಕೊಂಡಿದ್ದು, ಮಲೇಷ್ಯಾ 3ನೇ ಸ್ಥಾನವನ್ನು (ಕಂಚು) ಪದಕವನ್ನು ಗೆದ್ದುಕೊಂಡಿತು.
ಸಾಧಕರ ಸಾಲಿಗೆ ಮೀರಾಬಾಯಿ:
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸತತವಾಗಿ ಮೂರು ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದ ಭಾರತದ ಮೂರನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಅವರು ಸುಶೀಲ್ ಕುಮಾರ್ (2010, 2014, ಮತ್ತು 2018) ಹಾಗೂ ವಿನೇಶ್ ಫೋಗಟ್ (2014, 2018, ಮತ್ತು 2022) ಅವರನ್ನೊಳಗೊಂಡ ದೈತ್ಯ ಕ್ರೀಡಾಪಟುಗಳ ಗಣ್ಯರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.



