ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬಡಗನ್ನೂರು :ಕುತೂಹಲ ಕೆರಳಿಸಿದ ಪ್ರಕರಣ, ಬೇಧಿಸಿದ ಪೊಲೀಸರು

Published

on

 

ಪುತ್ತೂರು:22 ದಿನಗಳ ಹಿಂದೆ ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಕೇರಳದ ಕುಖ್ಯಾತ ದರೋಡೆಕೋರರ ತಂಡ ಈ ಕೃತ್ಯವನ್ನು ಎಸಗಿದ್ದಾರೆ. ಕೆಲ ದಿನಗಳ ಹಿಂದೆ ಸೀತಂಗೋಳಿ ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಸೆ.28ರ ರಾತ್ರಿ ಬಂಧಿಸಿದ್ದಾರೆ.

 

ಸೆ.6ರಂದು ತಡರಾತ್ರಿ ಗುರುಪ್ರಸಾದ್ ರೈಯವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿ 6 ಮಂದಿಯ ದರೋಡೆಕೋರರ ತಂಡ ದರೋಡೆ ಮಾಡಿತ್ತು.ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ 30 ಸಾವಿರ ರೂ.ನಗದು ಮತ್ತು ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಕಸ್ತೂರಿ ರೈಯವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿತ್ತು.ಹೋಗುವಾಗ ಗುರುಪ್ರಸಾದ್ ರೈ ಮತ್ತವರ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ, ಕಸ್ತೂರಿ ರೈಯವರಿಗೆ ಕುಡಿಯಲು ನೀರು ಕೊಟ್ಟು ಹೋಗಿದ್ದು, ಈ ಮನೆಯ ಋಣ ಹೊಂದಿರುವವರೇ ಯಾರೋ ಕೃತ್ಯ ಎಸಗಿದ್ದಾರೆ ಎನ್ನುವ ಸಂಶಯಕ್ಕೆ ಕಾರಣವಾಗಿತ್ತು.ಮನೆಯ ಮಾಹಿತಿ ಇರುವವರೇ ಈ ಕೃತ್ಯ ಎಸಗಿದ್ದಾರೆ ಮತ್ತು ಕೇರಳ ಮೂಲದ ದರೋಡೆಕೋರರ ತಂಡವೇ ಈ ಕೃತ್ಯ ಎಸಗಿದೆ ಎನ್ನುವ ಬಲವಾದ ಸಂಶಯದೊಂದಿಗೆ ಪೊಲೀಸರ ಒಂದು ತಂಡ ಕೇರಳದಲ್ಲಿ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ

 

ಈ ಪ್ರಕರಣದ ಬಗ್ಗೆ ಪುತ್ತೂರು ಪೊಲೀಸ್ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಅವರ ಉಪಸ್ಥಿತಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಟ್ಲ ಪೆರುವಾಯಿಯ ಸುಧೀರ್ ಮಣಿಯಾಣಿ, ಕೇರಳದ ಇಚ್ಚಂಗೋಡು ಗ್ರಾಮದ ಪಚ್ಚಂಬಳದ ರವಿ, ಪೈವಳಿಕೆ ಸಮೀಪದ ಅಟ್ಟಿಗೋಳಿಯ ಕಿರಣ್, ಸೀತಾಂಗೊಳ್ಳಿ ಸಮೀಪದ ಬಾಡೂರಿನ ವಸಂತ್, ಕೇರಳದ ಫೈಝಲ್ ಮತ್ತು ಕಾಸರಗೋಡಿನ ಎಡನಾಡ್ ಗ್ರಾಮದ ರಾಜೀವ ಗಾಂಧಿ ನಗರದ ಅಬ್ದುಲ್ ನಿಸಾರ್‌ ಕೃತ್ಯ ಎಸಗಿದ ಆರೋಪಿಗಳು. ಈ ಪ್ರಕರಣದ ಓರ್ವ ಕುಖ್ಯಾತ ಆರೋಪಿ ಕಾಞಂಗಾಡಿನ ನಿವಾಸಿ ಸನಲ್‌ ತಲೆಮರೆಸಿಕೊಂಡಿದ್ದಾನೆ. ಈತ ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನ ಮೇಲೆ 14ಪ್ರಕರಣಗಳು ದಾಖಲಾಗಿವೆ. ಫೈಝಲ್‌ ಮತ್ತು ಅಬ್ದುಲ್ ನಿಸಾರ್‌ ನಿಡ್ಪಳ್ಳಿಯಲ್ಲಿ ಮಹಿಳೆಯ ಕರಿಮಣಿ ಎಳೆದ ಪ್ರಕರಣ ಮತ್ತು ಕುದ್ದುಪದವಿನ SR ಪೆಟ್ರೋಲ್‌ ಬಂಕ್‌ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು.

 

ಇನ್ನೂ ಈ ಪ್ರಕರಣ ಆರೋಪಿ ಸುಧೀರ್‌ ಪೆರುವಾಯಿ ಎಂಬಾತ ಈ ಹಿಂದೆ ಕಾಳುಮೆಣಸು ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಗುರುಪ್ರಸಾದ್‌ ರೈ ಅವರಿಗೆ ಸಂಬಂಧಿಯೋರ್ವರ ಮೂಲಕ ಪರಿಚಯವಾಗಿ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.ಎಸ್ಪಿ ಸಿ.ಬಿ ರಿಷ್ಯಂತ್ ನಿರ್ದೇಶನದಲ್ಲಿ ಡಿವೈಎಸ್‌ಪಿ ಗಾನ ಪಿ ಕುಮಾರ್‌ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿಎಸ್‌ ನೇತೃತ್ವದಲ್ಲಿ ಪುತ್ತೂರು ಸಂಚಾರ ಪೊಲೀಸ್‌ ಠಾಣಾ ಪಿಎಸ್‌ ಐ ಉದಯ್‌ ರವಿ ಎಂ ವೈ, ಧನಂಜಯ ಪಿ ಸಿ, ಉಪ್ಪಿನಂಗಡಿ ಠಾಣಾ ಪಿ ಎಸ್‌ ಐ ರುಕ್ಮ ನಾಯ್ಕ್‌, ಉಪ್ಪಿನಂಗಡಿ ಠಾಣಾ ಹೆಚ್‌ ಸಿ ಉದಯ ರೈ, ಉಪ್ಪಿನಂಗಡಿ ಠಾಣಾ ಹೆಚ್ ಸಿ ಹರೀಶ್ಚಂದ್ರ, ವೇಣೂರು ಠಾಣಾ ಹೆಚ್‌ ಸಿ ಪ್ರವೀಣ್‌ ಮುರುಗೋಳಿ, ವಿಟ್ಲ ಪೊಲೀಸ್‌ ಠಾಣಾ ಹೆಚ್‌ ಸಿ ಉದಯ ರೈ, ಪುತ್ತೂರು ಗ್ರಾಮಾಂತರ ವೃತ್ತ ಕಚೇರಿಯ ಹೆಚ್‌ ಸಿ ಅಬ್ದುಲ್‌ ಸಲೀಂ, ಪಿಸಿ ಜಗದೀಶ್‌ ಅತ್ತಾಜೆ, ಎಚ್‌ ಸಿ ಹರೀಶ್‌, ಪುತ್ತೂರು ಗ್ರಾಮಂತರ ಠಾಣಾ ಎಸೈ ಮುರುಗೇಶ್‌, ಎಚ್‌ ಸಿ ಪ್ರವೀಣ್‌ ರೈ, ಹೆಚ್‌ ಸಿ ಅದ್ರಾಮ್‌, ಹೆಚ್‌ ಸಿ ಬಾಲಕೃಷ್ಣ, ಹೆಚ್‌ ಸಿ ಹರೀಶ್‌, ಹೆಚ್‌ ಸಿ ಪ್ರಶಾಂತ್‌, ಪಿಸಿ ಮುನಿಯ ನಾಯ್ಕ್‌, ಪುತ್ತೂರು ಸಂಚಾರ ಠಾಣಾ ಹೆಚ್‌ ಸಿ ಪ್ರಶಾಂತ್‌ ರೈ, ಪುತ್ತೂರು ನಗರ ಠಾಣಾ ಪಿಸಿ ವಿನಾಯಕ ಎಸ್‌ ಬಾರ್ಕಿ, ಪಿಸಿ ಶರಣಪ್ಪ ಪಾಟೀಲ್‌, ಬಂಟ್ವಾಳ ಸಂಚಾರ ಠಾಣಾ ಪಿಸಿ ವಿವೇಕ್‌, ಪಿಸಿ ಕುಮಾರ್‌ ಕೆ ಜಿಲ್ಲಾ ಗಣಕಯಂತ್ರ ವಿಭಾಗದ ಎ ಹೆಚ್‌ ಸಿ ಸಂಪತ್‌ ಕುಮಾರ್‌, ಸಿಪಿಸಿ ದಿವಾಕರ್‌, ವಾಹನ ಚಾಲಕ ಪ್ರವೀಣ್‌ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಶ್ಲಾಘನೀಯ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಪೊಲೀಸ್‌ ಅಧೀಕ್ಷಕರು ದ.ಕ ಜಿಲ್ಲೆ ರವರು ಈ ಪ್ರಕರಣದ ಪತ್ತೆಗೆ ವಿಶೇಷ ಪ್ರಯತ್ನವನ್ನು ನಡೆಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳನ್ನು ಶ್ಲಾಘಿಸಿರುತ್ತಾರೆ.

 

ಕೆಲವು ವರ್ಷಗಳ ಹಿಂದೆ ಇಡೀ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳನ್ನೇ ಬೆಚ್ಚಿ ಬೀಳಿಸುವಂತಹ ಪೆರ್ಲ ಜಬ್ಬಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಚ್ಚಂಬಳ ರವಿ ಜೀವಾವಧಿ ಶಿಕ್ಷೆಗೆ ಒಳಪಟ್ಟು 12 ವರ್ಷಗಳಿಂದ ಕೇರಳ ಕಾರಾಗೃಹದಲ್ಲಿದ್ದು, ಪೆರೋಲ್ ಮೇಲೆ ಬಂದು ಈ ಪ್ರಕರಣದಲ್ಲಿ ವಾಹನ ಕೊಟ್ಟ ಆರೋಪವಿದೆ. ಬಳಿಕ ಮತ್ತೆ ಕಾರಾಗೃಹಕ್ಕೆ ವಾಪಾಸಾಗಿದ್ದು ಆತನನ್ನು ಈ ಪ್ರಕರಣದಲ್ಲಿ ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ. ಈತ ಸೇರಿದಂತೆ ಒಟ್ಟು ಏಳು ಮಂದಿ ಸೇರಿ ದರೋಡೆ ಎಸಗಿದ್ದು ಈ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version