ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ದಲಿತರ ಮೇಲೆ ಅತಿಕ್ರಮಣವನ್ನು ಸಹಿಸುವುದಿಲ್ಲ :ಸೋಮನಾಥ್

Published

on

 

  • ಭೂಕಳ್ಳ ರಿಂದ,ದಲಿತರ ಜಾಮೀನನ್ನು ರಕ್ಷಿಸಿ: ಸೇಸಪ್ಪ ನಕ್ಕಿಲು

 

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಸರ್ವೆ ನಂಬರ್ 88ರಲ್ಲಿ 1.30 ಸೆಂಟ್ಸ್ ಸರಕಾರಿ ಜಮೀನನ್ನು ಅಂಬೇಡ್ಕರ್ ಭವನಕ್ಕೆ ಕಾದಿರಿಸುವಂತೆ ಗ್ರಾ.ಪಂ. ಆಡಳಿತ ನಿರ್ಣಯಿಸಿದ್ದು, ಆದರೆ ಇದನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿಕೊಂಡಿದ್ದಾರೆ. ಅದನ್ನು ತೆರವು ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅ.16ರಂದು 34 ನೆಕ್ಕಿಲಾಡಿ ಗ್ರಾ.ಪಂ.ನ ವಠಾರದಲ್ಲಿ ಪ್ರತಿಭಟನೆ ನಡೆಸಿತು.

 

 

ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಲಿತ ಮುಖಂಡರಾದ ಸೋಮನಾಥ, 34 ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಸರ್ವೇ ನಂಬರ್ 88ರಲ್ಲಿ 1.30 ಸೆಂಟ್ಸ್ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾಯ್ದಿರಿಸಬೇಕೆಂದು ನಿರ್ಣಯ ಮಾಡಿ ಕಂದಾಯ ಇಲಾಖೆಗೆ ಕಳುಹಿಸಿದೆ. ಆದರೆ ಕಂದಾಯ ಇಲಾಖೆಯಿಂದ ಇದಕ್ಕೆ ಸ್ಪಂದನೆ ದೊರೆತ್ತಿಲ್ಲ. ಈ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿಕೊಂಡು ಕೃಷಿ ಮಾಡಲು ಮುಂದಾಗಿದ್ದು, ಈ ಬಗ್ಗೆ ಕೇಳಿದಾಗ ಇದು ಸರ್ವೆ ನಂಬರ್‌ನ ಜಾಗ ಅಲ್ಲ ಎಂದು ಹೇಳುತ್ತಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಕೂಡಲೇ ಕಂದಾಯ ಇಲಾಖೆಯವರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬೇಡಿಕೆಯಿಟ್ಟ ಜಾಗವನ್ನು ಗಡಿ ಗುರುತು ಮಾಡಿ ನಕ್ಷೆ ಮಾಡಿ ಗ್ರಾ.ಪಂ.ಗೆ ಹಸ್ತಾಂತರಿಸಬೇಕು. ಖಾಸಗಿ ವ್ಯಕ್ತಿಯೋರ್ವರು ದಲಿತ ವ್ಯಕ್ತಿಗೆ ಹಣ ನೀಡಿ ಸರ್ವೇ ನಂಬರ್ 84ರಲ್ಲಿ ಕೂಡಾ 1 ಎಕ್ರೆ ಜಾಗವನ್ನು ಸ್ವಾಧೀನ ಮಾಡಿಕೊಂಡಿದ್ದು, ಕಾನೂನು ಪ್ರಕಾರ ದಲಿತರಿಗೆ ಸೇರಿದ ಜಾಗವನ್ನು ತೆಗೆದುಕೊಳ್ಳುವ ಹಾಗಿಲ್ಲ. ಆದ್ದರಿಂದ ಆ ಒಂದು ಎಕ್ರೆ ಜಾಗವನ್ನು ಕೂಡಾ ಆ ಖಾಸಗಿ ವ್ಯಕ್ತಿಯಿಂದ ಸ್ವಾಧೀನ ಪಡಿಸಿಕೊಂಡು ಅದನ್ನು ನಿವೇಶನರಹಿತರಿಗೆ ಹಂಚಬೇಕು ಎಂದು ಆಗ್ರಹಿಸಿದರು.

 

 

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಜಿಲ್ಲಾ ಮುಖಂಡರಾದ ಶೇಷಪ್ಪ ನೆಕ್ಕಿಲು ಮಾತನಾಡಿ, ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಬೇಕೆಂದು ಬೇಡಿಕೆಯಿಟ್ಟಿದ್ದ ಜಾಗವನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿಕೊಳ್ಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇದು ದುರಂಹಕಾರದ ಪರಮಾವಧಿಯಾಗಿದ್ದು, ಸಂವಿಧಾನವಿರೋಧಿ ನಡೆಯಾಗಿದೆ. ಎಲ್ಲರೂ ಬದುಕಲು ಅಂಬೇಡ್ಕರರ ಕೊಡುಗೆ ಇದೆ. ಅದ್ದರಿಂದ ದಲಿತರಿಗೆ ಅನ್ಯಾಯವಾದಾಗ ಸುಮ್ಮನಿರಲು ಸಾಧ್ಯವಿಲ್ಲ. ನ್ಯಾಯ ಸಿಗದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

 

 

ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ಪ್ರಮುಖರಾದ ಲಿಂಗಪ್ಪ ನೆಕ್ಕಿಲು, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಪ್ರಕಾಶ್ ಬಜತ್ತೂರು, ತನಿಯಪ್ಪ ಶಾಂತಿನಗರ, ಮೀನಾಕ್ಷಿ, ಗ್ರಾಮಸ್ಥರಾದ ರೇಖಾ, ಮರಿಯಮ್ಮ ಕರ್ವೇಲು, ಝೀನತ್ ಕರ್ವೇಲು, ನವಾಝ್ ಕರ್ವೇಲು, ಹನ್ನತ್ ಕರ್ವೇಲು, ನವಾಝ್ ಕರ್ವೇಲು, ಫಾರೂಕ್ ಮತ್ತಿತರರು ಇದ್ದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಸಂಚಾಲಕ ಕೂಸಪ್ಪ ನಾಗನಕೋಡಿ ಸ್ವಾಗತಿಸಿ, ವಂದಿಸಿದರು.

 

ತಹಶೀಲ್ದಾರ್ ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದ ಪ್ರತಿಭಟನಕಾರರು, ಅಲ್ಲೇ ನೆಲದಲ್ಲಿ ಕೂತು ಪ್ರತಿಭಟನೆ ಮುಂದುವರಿಸಿದರು. 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಹಾಗೂ ಪಿಡಿಒ ಸತೀಶ್ ಡಿ. ಬಂಗೇರ ಅವರಿಗೆ ಮನವಿ ನೀಡಿದ ಪ್ರತಿಭಟನಕಾರರು ಯಾವುದೇ ಕಾರಣಕ್ಕೂ ತಹಶೀಲ್ದಾರ್ ಬಾರದೇ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ 34 ನೆಕ್ಕಿಲಾಡಿ ವಿಎ ಯವರು ಸ್ಥಳಕ್ಕಾಗಮಿಸಿ, ಶೀಘ್ರವೇ ಈ ಜಮೀನಿನ ಸರ್ವೆ ಕಾರ್ಯ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version